ಎಂ.ಎ. ಮನ್ಸೂರ್ ಅಲಿ ಕಣಕ್ಕೆ

ಕೊಡಗು ಜಿಲ್ಲೆಯ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷವೊಂದು ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ.

ಜಾತ್ಯತೀತ ಜನತಾದಳ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿ ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಅವರಿಗೆ ಜೆಡಿಎಸ್ ಮಣೆ ಹಾಕಿದೆ.

೪೦ ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಮತಗಳು ಇರುವ ವೀರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ, ಜೆಡಿಎಸ್ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದೆ.

ಜಿಲ್ಲೆಯಲ್ಲಿ ಎಸ್.ಡಿ.ಪಿ.ಐ. ಹೊರತುಪಡಿಸಿ ಜೆಡಿಎಸ್ ಪಕ್ಷ ಮಾತ್ರ ಮುಸ್ಲಿಂ ಅಭ್ಯರ್ಥಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ೧೯೯೮ ರಿಂದೀಚೆಗೆ ಜೆಡಿಎಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿರುವ ನಾಪೋಕ್ಲುವಿನ ಎಂ.ಎ. ಮನ್ಸೂರ್ ಅಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿ ನೀಡಲು ಸಜ್ಜುಗೊಂಡಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಾರರಾಗಿರುವ ಮುಸ್ಲಿಮರನ್ನು ಕೊಡಗು ಕಾಂಗ್ರೆಸ್ ಮತಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಕೆಲವರು ಮಾಡುತ್ತಾರೆ.

ಮುಸ್ಲಿಮ್ ನಾಯಕರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾಕೆ ನೀಡುತ್ತಿಲ್ಲ ಎಂದು ಹಲವಾರು ಬಾರಿ ಜೆಡಿಎಸ್ ಪ್ರಶ್ನಿಸುತ್ತಾ ಬಂದಿದೆ. ಇದೀಗ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಗೆ ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ನೀಡಿ, ಜೆಡಿಎಸ್ ಪ್ರಬಲವಾಗಿರುವ ಮಡಿಕೇರಿ ಕ್ಷೇತ್ರದಲ್ಲಿ ಗೆಲುವಿಗೆ ಮುಸ್ಲಿಂ ಮತದಾರರನ್ನು ಜೆಡಿಎಸ್ ತನ್ನತ್ತ ಸೆಳೆಯುವ ತಂತ್ರ ರೂಪಿಸಿದೆ.

ಪಕ್ಷ ನಿಷ್ಠೆಗೆ ಒಲಿದ ಟಿಕೆಟ್

ಎಂ.ಎ. ಮನ್ಸೂರ್ ಅಲಿ ೧೯೯೮ ರಿಂದಲೇ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆಪ್ತರಾಗಿರುವ ಎಂ.ಎ. ಮನ್ಸೂರ್ ಆಲಿ ಅವರು ಜೆಡಿಎಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ, ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಕಳೆದ ೨೫ ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಮನ್ಸೂರ್ ಅಲಿ ಅವರಿಗೆ ಜೆಡಿಎಸ್ ಬಿ.ಫಾರಂ ಸಿಗುತ್ತಿದ್ದಂತೆ ಚರ್ಚೆಗಳು ಕೂಡ ಶುರುವಾಗಿದೆ. ಮುಸ್ಲಿಂ ಮತಗಳನ್ನು ಒಡೆಯಲು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಯಾಕೆ ವೀರಾಜಪೇಟೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಕೂಡ ಪ್ರಶ್ನಿಸುತ್ತಿದ್ದಾರೆ.

ವೀರಾಜಪೇಟೆ ಕ್ಷೇತ್ರದಲ್ಲಿ ಬಲಿಷ್ಠಗೊಳ್ಳದ ಜೆಡಿಎಸ್!

ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ೧೧ ಸಾವಿರ ಮತಗಳನ್ನು ಪಡೆದಿದ್ದ ಸಂಕೇತ್ ಪೂವಯ್ಯ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಡಿಕೇರಿ ಕ್ಷೇತ್ರಕ್ಕೆ ಹೋಲಿಸಿದರೆ, ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೊAಡಿಲ್ಲ. ಪ್ರತೀ ಚುನಾವಣೆಯಲ್ಲಿ ೫ ರಿಂದ ೧೦ ಸಾವಿರ ಮತಗಳಿಗೆ ಸೀಮಿತಗೊಳ್ಳುತ್ತಿದೆ.

೨೦೦೮ ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಮಾಚಯ್ಯ ಅವರು ೨೯ ಸಾವಿರ ಮತಗಳು ಪಡೆದಿದ್ದರು. ಇದು ಜೆಡಿಎಸ್ ವೀರಾಜಪೇಟೆ ಕ್ಷೇತ್ರದಲ್ಲಿ ಪಡೆದ ಅತೀ ಹೆಚ್ಚು ಮತಗಳು. ಹಾಲಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರಿಗೆ ಜೆಡಿಎಸ್ ಅಭ್ಯರ್ಥಿ ಎಂ.ಎ. ಮನ್ಸೂರ್ ಆಲಿ ಪೈಪೋಟಿ ನೀಡುತ್ತಾರಾ ಎಂದು ಕಾದುನೋಡಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ