ಮುಳ್ಳೂರು, ಏ. ೨೧: ದಿನೇ ದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದುವರೆಗೆ ಒಂದು ಹನಿಯೂ ಮಳೆ ಯಾಗ ದಿರುವುದರಿಂದ ಜನರು ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಬಹಳಷ್ಟು ಕಡೆಗಳಲ್ಲಿ ಜನರು ಮಳೆಯ ಆಗಮನಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುತ್ತಿದ್ದಾರೆ.

ಉತ್ತರ ಕೊಡಗಿನ ಶನಿವಾರ ಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಜನರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಾರೆ. ಕೃಷಿಕರು ಮಳೆಯನ್ನು ನಂಬಿ ಕೃಷಿ ಮಾಡುತ್ತಾರೆ. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಇದುವರೆಗೂ ಒಂದು ಹನಿ ಮಳೆಯಾಗದಿರುವ ಹಿನ್ನೆಲೆ ಕೊಡ್ಲಿಪೇಟೆ ಸಮೀಪದ ನೀರುಗುಂದ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಮದ ಶ್ರೀ ಕ್ಷೇತ್ರ ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಳೆಯ ಆಗಮನಕ್ಕಾಗಿ ಗ್ರಾಮದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನೀರುಗುಂದ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಕಾಫಿ, ತೆಂಗು, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇದುವರೆಗೂ ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಬೆಳೆಗಳು ಸುಟ್ಟು ಹೋಗಿದ್ದು, ರೈತರು ಕಂಗೆಟ್ಟಿದ್ದಾರೆ. ಕಳೆದ ಬಾರಿ ಇದೇ ಅವಧಿಯಲ್ಲಿ ಕೊಡ್ಲಿಪೇಟೆ ಹೋಬಳಿ ಯಲ್ಲಿ ೭ ಇಂಚು ಮಳೆಯಾಗಿತ್ತು. ಈ ವರ್ಷ ಒಂದು ಹನಿಯೂ ಮಳೆ ಯಾಗದಿರುವುದರಿಂದ ಕೃಷಿ ಬೆಳೆ ಸುಟ್ಟು ಹೋಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಗ್ರಾಮದ ಮಳೆ ಮಲ್ಲೇಶ್ವರ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಮಾಡಿದ್ದೇವೆ ಎಂದು ರೈತರು ಹೇಳಿದರು. ಮಳೆಯ ಪ್ರಾರ್ಥನೆಗಾಗಿ ಗ್ರಾಮದ ಅವಿವಾಹಿತ ಮತ್ತು ಶಿವದೀಕ್ಷೆ ಪಡೆದಿರುವ ಯುವಕನೊಬ್ಬ ಬೆಳಗ್ಗಿನಿಂದಲೇ ಉಪವಾಸ ವ್ರತದಲ್ಲಿದ್ದು, ಸ್ವಾಮೀಜಿ ಅವರ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಪೂಜಾ ಕಾರ್ಯದಲ್ಲಿ ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.