ಕಣಿವೆ, ಏ. ೨೦: ರಾತ್ರಿಯಿಡೀ ಅಮ್ಮಾ ಬೇಕು ಅಮ್ಮಾ ಬೇಕು ಅಂತಾ ಒಂದೇ ಸಮನೆ ರಚ್ಚೇ ಹಿಡೀತಾನೆ. ಒಂದೇ ಸಮನೆ ಕಿರುಚುತ್ತಾನೆ. ಘೀಳಿಡುತ್ತಾನೆ. ಹಗಲಿಡೀ ಮರದ ಬುಡದ ನೆರಳಲ್ಲಿ ನಿದ್ರೆ ಹೊಡೀತಾನೆ.
ಇದು ಕಳೆದ ನಾಲ್ಕು ದಿನಗಳ ಹಿಂದೆ ಸುಳ್ಯದ ಅರಣ್ಯ ವಿಭಾಗದ ಕೆರೆಯೊಂದರ ಬಳಿ ಅನಾಥಗೊಂಡು ಅಮ್ಮನನ್ನು ಹುಡುಕುತ್ತಿದ್ದ ಒಂದೂವರೆ ತಿಂಗಳ ಪ್ರಾಯದ ಗಂಡು ಮರಿಯಾನೆ ದುಬಾರೆಯ ಅರಣ್ಯದೊಳಗಿನ ಮಾವುತರ ಕುಟುಂಬದ ಸದಸ್ಯರಲ್ಲಿ ಆರೈಕೆಯಲ್ಲಿರುವ ಹಸುಳೆಯ ಸ್ಥಿತಿ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಆಸುಪಾಸಿನ ಕೆರೆಗೆ ನೀರು ಕುಡಿಯಲೆಂದು ತನ್ನ ಹಸುಳೆಯೊಂದಿಗೆ ಬಂದ ತಾಯಿ ಕಾಡಾನೆ ಅಲ್ಲಿನ ಜನರ ಅಬ್ಬರಕ್ಕೋ ಏನೋ ಅಲ್ಲಿಂದ ಹೆದರಿ ಅಲ್ಲಿಯೇ ತನ್ನ ಹಸುಳೆಯನ್ನು ಬಿಟ್ಟು ಕಾಲ್ಕಿತ್ತಿರಬಹುದು. ಅಥವಾ ಅರಣ್ಯದೊಳಗೆ ತಾಯಿಯಾನೆಯಿಂದ ಬೇರ್ಪಟ್ಟ ಈ ಹಸುಳೆ ತನ್ನ ಅಮ್ಮನನ್ನು ಹುಡುಕಿ ಅಲ್ಲಿನ ಕೆರೆಯಂಗಳಕ್ಕೆ ಬಂದಿರಬಹುದು ಎಂಬುದು ಅಲ್ಲಿನ ಅರಣ್ಯ ಸಿಬ್ಬಂದಿಗಳ ಅಭಿಪ್ರಾಯವಾಗಿದೆ.
ಸೆರೆ ಸಿಕ್ಕ ಮರಿ ಆನೆ ಒಂದೆರಡು ದಿನ ಆಶ್ರಯದಲ್ಲಿಟ್ಟುಕೊಂಡು ಮಾಡಿಕೊಂಡು ಹಸುಳೆ ಸಿಕ್ಕ ಆಸುಪಾಸಿನ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಒಂದು ವೇಳೆ ತಾಯಿಯಾನೆಯನ್ನು ಅರಣ್ಯ ಸಿಬ್ಬಂದಿಗಳು ಹುಡುಕಿದರೂ ಕೂಡ ತಾಯಿಯ ಸುಳಿವು ಲಭಿಸದ ಕಾರಣ ಮರಿಯಾನೆಯನ್ನು ಅಲ್ಲಿನ ಅರಣ್ಯಾಧಿಕಾರಿಗಳು ದುಬಾರೆಯ ಸಾಕಾನೆಯ ಶಿಬಿರಕ್ಕೆ ರವಾನಿಸಿದ್ದಾರೆ.
ದುಬಾರೆಯ ಸಾಕಾನೆ ಶಿಬಿರದ ಸಾಕಾನೆಯೊಂದರ ಮಾವುತರ ವಾಸದ ಮನೆಯ ಆವರಣದಲ್ಲಿ ಈ ಕಾಡಾನೆ ಮರಿಯನ್ನು ಜೋಪಾನ ಮಾಡಲಾಗುತ್ತಿದೆ.
ಹಾಲು ಹಾಗೂ ಗಂಜಿ ಸೇವನೆ
ದುಬಾರೆಯ ಸಾಕಾನೆಯ ಮಾವುತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಒಂದೂವರೆ ತಿಂಗಳ ಪ್ರಾಯದ ಈ ಕಾಡಾನೆ ಮರಿಗೆ ಸದ್ಯಕ್ಕೆ ಬಿಸಿ ನೀರಿಗೆ ಹಾಲಿನ ಪೌಡರ್ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಕುಡಿಸಲಾಗುತ್ತಿದೆ. ಹಾಗೆಯೇ ಒಂದು ಬಾರಿಗೆ ಕುಸುಲಕ್ಕಿ ಗಂಜಿ ಮಾಡಿ ಫೀಡಿಂಗ್ ಬಾಟಲ್‌ನಲ್ಲಿ ಕುಡಿಸಲಾಗುತ್ತಿದೆ.
ಬೆಳಗ್ಗೆ ಹಾಗೂ ಸಂಜೆ ಬಿಸಿ ನೀರಿನ ಸ್ನಾನ ಮಾಡಿಸಲಾಗುತ್ತಿದ್ದು ಬಿಸಿಲ ತಾಪಕ್ಕೆ ಕಂದಮ್ಮನ ನೆತ್ತಿ ತಣ್ಣಗಿರಲೆಂದು ಹರಳೆಣ್ಣೆ ಹಚ್ಚುವ ಮೂಲಕ ಮಾವುತ ಕುಟುಂಬದ ಸದಸ್ಯರಾದ ಕಾವೇರಿ, ವಿಜಯ, ಕಿರಣ, ಗಗನ, ದೀಪಕ್ ಮೊದಲಾದವರು ಆರೈಕೆಯಲ್ಲಿ ತೊಡಗಿದ್ದಾರೆ.
ರಾತ್ರಿಯಾಯಿತು ಅಂದರೆ ಅಮ್ಮನ ನೆನೆದು ಕಿರುಚುತ್ತಾನೆ. ಘೀಳಿಡುತ್ತಾನೆ.
ಮಲಗೋದೆ ಇಲ್ಲ. ಹಾಗಾಗಿ ನಾವು ಮಧ್ಯರಾತ್ರಿಯವರೆಗೂ ಅದರ ಜೊತೆಯೇ ಇದ್ದು ಅದನ್ನು ಸಮಾಧಾನ ಮಾಡಿ ಸಂತೈಸುತ್ತೇವೆ. ಅವನು ಮಲಗುವವರೆಗೂ ನಾವು ಮಲಗಲ್ಲ.
ಮನೆಯ ಆವರಣದಲ್ಲಿ ಅವನ ಸನಿಹವೇ ನಾವು ಮಲಗುತ್ತೇವೆ.
ಹಗಲಿಡೀ ಹಾಲು, ಗಂಜಿ ಕುಡಿದು ನಲಿದು
(ಮೊದಲ ಪುಟದಿಂದ) ಆಟವಾಡುವ ಆನೆ ರಾತ್ರಿಯಾಯಿತೆಂದರೆ ಅಮ್ಮನಿಗಾಗಿ ಕಣ್ಣೀರಾಗುತ್ತಾನೆ ಎಂದು ಕಾವೇರಿ ಹೇಳುತ್ತಾರೆ.
೨೩ನೇ ಅತಿಥಿ
ದುಬಾರೆಯ ಸಾಕಾನೆಯ ಶಿಬಿರದಲ್ಲಿ ಇದೀಗ ಈ ಹಸುಳೆ ೨೩ನೇ ಅತಿಥಿಯಾಗಿದ್ದಾನೆ. ೫೮ ರ ಪ್ರಾಯದ ಪ್ರಶಾಂತ ಶಿಬಿರದ ಅತ್ಯಂತ ಹಿರಿಯ ಸದಸ್ಯ ಹಾಗೂ ಯಜಮಾನ.
ಸೆರೆಸಿಕ್ಕ ಆನೆ ೪೫ ರಿಂದ ೫೫ ದಿನಗಳ ಪ್ರಾಯ ಇರುಬಹುದು ಎಂದು ಅಂದಾಜಿಸಲಾಗಿದೆ. ಈ ಹಸುಳೆಯ ಆರೈಕೆಯನ್ನು ಮಾವುತ ಕುಟುಂಬದ ಕಿರಣ ಎಂಬಾತನಿಗೆ ವಹಿಸಲಾಗಿದ್ದು, ಈತ ಅತ್ಯಂತ ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದಾನೆ.ಹಾಸಿಗೆ ಮೇಲೆ ಮಲಗಲ್ಲ
ಈ ಎಳೆ ಹಸುಳೆ ಕಾಡಾನೆ ಮರಿಗೆ ನೆಲದ ಮಣ್ಣಿನಲ್ಲಿ ಮಲಗಿಸಬಾರದು ಎಂದು ತಾನು ಬಳಸುತ್ತಿದ್ದ ಹಾಸಿಗೆಯನ್ನು ಈ ಮಾವುತ ಕಿರಣ ನೀಡಿದ್ದಾನೆ. ಆದರೆ ಹಾಸಿಗೆಯನ್ನು ಒಲ್ಲೆ ಎಂದು ಗುಡಿಸಿ ಸಾರಿಸಿದ ನೆಲದ ಮೇಲೆ ಮಲಗುತ್ತಿದ್ದಾನೆ. ಮಲಗಿ ನಿದ್ದೆಗೆ ಜಾರುವ ಇವನನ್ನು ಎಬ್ಬಿಸಲು ಹಾಲುಣಿಸುವ ಫೀಡಿಂಗ್ ಬಾಟಲ್ ತೋರಿಸಿದರೆ ಸಾಕು. ಚಕ್ ಅಂತಾ ಒಂದೇ ಸಮನೆ ಎದ್ದು ನಿಂತು ಬಿಡುತ್ತಾನೆ.
ಪ್ರವಾಸಿಗರಿಂದ ದೂರ
ಬೇಸಿಗೆಯ ದಿನಗಳಾದ ಕಾರಣ ಶಿಬಿರಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ಈ ಹಸುಳೆಗೆ ಕಿರಿ ಕಿರಿ ಆಗಬಾರದು ಎಂಬ ಕಾರಣಕ್ಕೆ ಈತನನ್ನು ಶಿಬಿರದಿಂದ ಒಂದು ಕಿಲೋ ಮೀಟರ್ ದೂರದ ಮಾವುತನ ಮನೆಯಂಗಳದಲ್ಲಿ ಪ್ರತ್ಯೇಕವಾಗಿ ಆರೈಕೆ ಮಾಡಲಾಗುತ್ತಿದೆ. (ವಿಶೇಷ ವರದಿ : ಕೆ.ಎಸ್.ಮೂರ್ತಿ)