ಹೆಚ್.ಜೆ. ರಾಕೇಶ್
ಮಡಿಕೇರಿ, ಏ. ೧೯: ಬಿರುಬೇಸಿಗೆಯ ಕಾವಿನ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಯ ತಾಪಮಾನ ಹೆಚ್ಚಾಗಿದೆ. ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ. ಪ್ರಚಾರ, ತಂತ್ರ-ಪ್ರತಿ ತಂತ್ರಗಾರಿಕೆಯಲ್ಲಿ ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದಾರೆ.
ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡದಲ್ಲಿ ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಇದರೊಂದಿಗೆ ಅಭ್ಯರ್ಥಿಗಳ ಆಸ್ತಿಯ ಲೆಕ್ಕಾಚಾರವು ಗಮನ ಸೆಳೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ನಾಪಂಡ ಮುತ್ತಪ್ಪ ಬರೋಬ್ಬರಿ ರೂ. ೧೧೫ ಕೋಟಿಯ ಒಡೆಯರಾಗಿರುವುದು ಗಮನಾರ್ಹವಾಗಿದೆ.
ರೂ. ೧.೦೪ ಕೋಟಿ ಚರಾಸ್ತಿ ಹೊಂದಿರುವ ರಂಜನ್
೬ ಬಾರಿ ವಿಧಾನಸಭೆ ಪ್ರವೇಶಿಸಿರುವ ಹಾಲಿ ಶಾಸಕ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಮಂಡೇಪAಡ ಅಪ್ಪಚ್ಚು ರಂಜನ್ ಅವರು ರೂ. ೧ ಕೋಟಿ, ೪ ಲಕ್ಷ, ೧೬ ಸಾವಿರ ಚರಾಸ್ತಿ ಹೊಂದಿದ್ದು, ಪತ್ನಿ ಹೆಸರಿನಲ್ಲಿ ರೂ. ೭೪.೩೩ ಲಕ್ಷ ಚರಾಸ್ತಿ ಇದೆ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ರಂಜನ್ ಹೆಸರಿನಲ್ಲಿ ರೂ. ೧.೧೫ ಕೋಟಿ, ಪತ್ನಿ ಹೆಸರಿನಲ್ಲಿ ರೂ. ೨ ಕೋಟಿ ಸ್ವಯಾರ್ಜಿತ, ರೂ. ೪ ಕೋಟಿಯಷ್ಟು ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ. ರೂ. ೫.೬೮ ಲಕ್ಷ ಸಾಲವೂ ರಂಜನ್ಗಿದೆ. ಕಾಫಿ ತೋಟ ಆದಾಯದ ಮೂಲ ಎಂದು ದೃಢೀಕರಿಸಿದ್ದು, ರೂ. ೧ ಲಕ್ಷ ಮೌಲ್ಯದ ೨೦ ಗ್ರಾಂ ಚಿನ್ನಾಭರಣ, ರಂಜನ್ ಪತ್ನಿ ಬಳಿ ರೂ. ೨೦ ಲಕ್ಷ ಮೌಲ್ಯದ ೧ ಕೆಜಿ ಚಿನ್ನಾಭರಣಗಳಿವೆ. ರೂ. ೯೧.೯೦ ಲಕ್ಷದಷ್ಟು ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿದ್ದಾರೆ.
ಕುಂಬೂರು ಹಾಗೂ ಹಾಡಗೇರಿಯಲ್ಲಿ ೩೪ ಎಕರೆ ಕೃಷಿ ಭೂಮಿ, ಮೈಸೂರು ಜಿಲ್ಲೆಯ ಇಲವಾಲ ಬಳಿಯ ಬೆಳವಾಡಿಯಲ್ಲಿ ೧.೫೦ ಎಕರೆ, ಕುಶಾಲನಗರ ಸಮೀಪದ ಬೈಚನಹಳ್ಳಿಯಲ್ಲಿ ೪೦ ಸೆಂಟ್ ನಿವೇಶನ ಹೊಂದಿದ್ದಾರೆ.
ರೂ. ೪ ಕೋಟಿ ಸ್ಥಿರಾಸ್ತಿ ಹೊಂದಿರುವ ಬೋಪಯ್ಯ
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಮತ್ತೊಮ್ಮೆ ಸ್ಪರ್ಧೆ ಬಯಸಿರುವ
ಕೆ.ಜಿ. ಬೋಪಯ್ಯ
(ಮೊದಲ ಪುಟದಿಂದ) ರೂ. ೪ ಕೋಟಿ ೩೦ ಲಕ್ಷ ಮೌಲ್ಯದ ಸ್ವಯಾರ್ಜಿತ ಸ್ಥಿರಾಸ್ತಿ ಹೊಂದಿದ್ದಾರೆ. ಕೆ.ಜಿ. ಬೋಪಯ್ಯ ಹೆಸರಿನಲ್ಲಿ ರೂ. ೯೦.೭೭ ಲಕ್ಷ, ಪತ್ನಿ ಹೆಸರಿನಲ್ಲಿ ರೂ. ೧.೨೮ ಕೋಟಿ ಚರಾಸ್ತಿಗಳಿವೆ.
ರೂ. ೯೫ ಲಕ್ಷ ವೈಯಕ್ತಿಕ ಸಾಲ, ಪತ್ನಿ ಜೊತೆ ಜಂಟಿಯಾಗಿ ರೂ. ೭೩ ಲಕ್ಷ ಸಾಲ ಹೊಂದಿದ್ದಾರೆ. ಕೈಯಲ್ಲಿ ರೂ. ೫ ಲಕ್ಷ ಹಣ ಇದೆ. ರೂ. ೨೧.೮೮ ಲಕ್ಷ ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ಹಣವಿದೆ. ಪತ್ನಿ ಹೆಸರಿನಲ್ಲಿ ರೂ. ೨೫.೮೬ ಲಕ್ಷ ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇವೆ.
ಉಳಿದಂತೆ ೬೫೦ ಗ್ರಾಂ ಚಿನ್ನ, ೬ ಕೆಜಿ ಬೆಳ್ಳಿ ಸೇರಿ ರೂ. ೪೦.೨೬ ಲಕ್ಷ ಮೌಲ್ಯದ ಆಭರಣಗಳು ಬೋಪಯ್ಯ ಅವರ ಬಳಿ, ರೂ. ೪೭.೬೦ ಲಕ್ಷ ಮೌಲ್ಯದ ೮೫೦ ಗ್ರಾಂ ಚಿನ್ನ ಬೋಪಯ್ಯ ಅವರ ಪತ್ನಿ ಹೆಸರಿನಲ್ಲಿದೆ. ಮಗಳ ಬಳಿ ರೂ. ೧.೩೪ ಲಕ್ಷದ ಚಿನ್ನಾಭರಣವಿದೆ. ಪತ್ನಿಯ ಹೆಸರಿನಲ್ಲಿಯೂ ರೂ. ೧.೦೫ ಕೋಟಿ ಮೌಲ್ಯದ ಸ್ವಯಾರ್ಜಿತ ಸ್ವತ್ತುಗಳಿವೆ.
ಮುತ್ತಪ್ಪ ನೂರಾರು
ಕೋಟಿಯ ಒಡೆಯ
ರಿಯಲ್ ಎಸ್ಟೇಟ್, ಕೃಷಿ ಹಾಗೂ ಹೈನುಗಾರಿಕೆಯ ಮೂಲಕ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ್ದಾರೆ. ರಾಜ್ಯದ ವಿವಿಧೆಡೆ ನೂರಾರು ಎಕರೆ ಜಾಗ ಹೊಂದಿರುವ ಮುತ್ತಪ್ಪ ಅವರು ಕೃಷಿ, ಹೈನುಗಾರಿಕೆಯಿಂದ ಆರ್ಥಿಕವಾಗಿ ಲಾಭಗಳಿಸಿದ್ದಾರೆ.
ಬೆಂಗಳೂರು, ಮೈಸೂರು, ಹುಣಸೂರು, ಕೊಡಗು ಸೇರಿದಂತೆ ವಿವಿಧೆಡೆ ೧೨೬ ಎಕರೆ, ೮ ಗುಂಟೆ ನಿವೇಶನ ಹೊಂದಿದ್ದು, ಇದುವೆ ರೂ. ೧೦೭ ಕೋಟಿ ಮೌಲ್ಯ ದಾಟುತ್ತದೆ. ತುಮಕೂರು, ಮೈಸೂರಿನ ನಾಗವಾಲದಲ್ಲಿರುವ ನಿವೇಶನಗಳು ರೂ. ೧೯ ಕೋಟಿಗೂ ಹೆಚ್ಚಿನ ಮೌಲ್ಯದ್ದಾಗಿದೆ. ಹೈನುಗಾರಿಕೆಯಿಂದ ರೂ. ೧ ಕೋಟಿಗೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ೬ ಎಕರೆ ಕಾಫಿ ತೋಟ ಮುತ್ತಪ್ಪ ಅವರ ಹೆಸರಿನಲ್ಲಿದೆ. ರೂ. ೩೦ ಲಕ್ಷದಷ್ಟು ಚಿನ್ನಾಭರಣ, ರೂ. ೧.೯೦ ಕೋಟಿ ಮೌಲ್ಯದ ವಾಹನದ ಒಡೆಯರಾಗಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುತ್ತಪ್ಪ ಅವರು ರೂ. ೧೧೫ ಕೋಟಿ, ೭೬ ಲಕ್ಷದ ೯೫ ಸಾವಿರ ನಿವ್ವಳ ಹೊಂದಿದ್ದು, ವಿವಿಧ ಬ್ಯಾಂಕ್ಗಳಲ್ಲಿ ರೂ. ೧೬ ಕೋಟಿ, ೭೨ ಲಕ್ಷ, ೮೧ ಸಾವಿರ ಸಾಲವೂ ಇದೆ. ರೂ. ೯೬.೪೫ ಲಕ್ಷದಷ್ಟು ವಿವಿಧ ಸ್ತರಗಳಲ್ಲಿ ಹೂಡಿಕೆ ಮಾಡಿದ್ದಾರೆ. ರೂ. ೩೪ ಕೋಟಿ, ೫೫ ಲಕ್ಷ, ೮೨ ಸಾವಿರ ಸ್ಥಿರಾಸ್ತಿ, ರೂ. ೧ ಕೋಟಿಯಷ್ಟು ಚರಾಸ್ತಿ ಇದೆ.
ಮಂಥರ್ ಬಳಿ
ರೂ. ೧.೮೧ ಕೋಟಿ ಆಸ್ತಿ
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಡಾ.ಮಂಥರ್ ಗೌಡ ಬಳಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ರೂ. ೧ ಕೋಟಿ ೮೧ ಲಕ್ಷ ೩೩ ಸಾವಿರ ಮೌಲ್ಯ ಇದೆ.
ಮಂಥರ್ಗೆ ರೂ. ೯೧.೩೩ ಲಕ್ಷ ಚರಾಸ್ತಿ, ರೂ. ೯೦ ಲಕ್ಷ ಸ್ಥಿರಾಸಿ ಇದ್ದರೆ, ಮಂಥರ್ ಪತ್ನಿ ರೂ. ೧ ಕೋಟಿ, ೮೬ ಲಕ್ಷ, ೬೨ ಸಾವಿರ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ ರೂ. ೧.೬೦ ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಸ್ವಯಂ ಖರೀದಿಸಿದ ಆಸ್ತಿ ರೂ. ೯೦ ಲಕ್ಷದಷ್ಟಿದೆ. ಜೊತೆಗೆ ರೂ. ೨೨ ಲಕ್ಷದಷ್ಟು ಸಾಲವನ್ನು ವಿವಿಧ ಬ್ಯಾಂಕ್ನಲ್ಲಿ ಪಡೆದಿದ್ದಾರೆ. ಮಂಥರ್ ವಾರ್ಷಿಕ ರೂ. ೮.೬೫ ಲಕ್ಷ ಆದಾಯ ಹೊಂದಿದ್ದು, ೧೮ ಎಕರೆ ಕೃಷಿ ಜಾಗ, ಬೆಂಗಳೂರಿನಲ್ಲಿ ಒಂದು ಅಪಾರ್ಟ್ಮೆಂಟ್ ಅವರ ಹೆಸರಿನಲ್ಲಿದೆ ಎಂದು ಅಫಿಡವಿಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಪೊನ್ನಣ್ಣ ಹೆಸರಿನಲ್ಲಿ
ರೂ. ೯ ಕೋಟಿ ಚರಾಸ್ತಿ
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರ ಚರಾಸ್ತಿ ಮೌಲ್ಯ ರೂ. ೯ ಕೋಟಿ ೪೮ ಲಕ್ಷ ಇದೆ. ಪತ್ನಿ ಹೆಸರಿನಲ್ಲಿ ರೂ. ೭೨ ಲಕ್ಷ, ಅವಲಂಬಿತರ ಹೆಸರಿನಲ್ಲಿ ಒಟ್ಟು ರೂ. ೧೩ ಲಕ್ಷ ಚರಾಸ್ತಿ ಇದೆ.
ಪೊನ್ನಣ್ಣ ರೂ. ೨೦ ಲಕ್ಷ ಮೌಲ್ಯದ ಸ್ಥಿರಾಸ್ತಿ, ರೂ. ೧೩ ಕೋಟಿಯಷ್ಟು ಸ್ವಯಂ ಖರೀದಿಸಿದ ಆಸ್ತಿ ಗಳಿಸಿದ್ದಾರೆ. ಪೊನ್ನಣ್ಣ ಹೆಸರಿನಲ್ಲಿ ರೂ. ೪.೫೦ ಕೋಟಿ, ಪತ್ನಿ ಹೆಸರಿನಲ್ಲಿ ರೂ. ೧೨.೯೯ ಲಕ್ಷ ಸಾಲ ಇದೆ. ಬೆಂಗಳೂರಿನಲ್ಲಿ ೨ ಫ್ಲಾö್ಯಟ್, ಆರ್.ಟಿ. ನಗರದಲ್ಲಿ ೩೪೨೫ ಚದರ ಅಡಿಯ ನಿವೇಶನ, ಬೆಂಗಳೂರು ಕುದುರೆಗೆರೆಯಲ್ಲಿ ೪ ಎಕರೆ ವಾಣಿಜ್ಯ ಉದ್ದೇಶದ ಜಾಗ ಹೊಂದಿದ್ದಾರೆ. ಬಾಳುಗೋಡುವಿನಲ್ಲಿ ೧೨.೨೪ ಎಕರೆ (ಜಂಟಿ ಮಾಲೀಕತ್ವ), ಹೈಸೊಡ್ಲುರು ೫.೮೧ ಎಕರೆ, ಕೋಣಗೇರಿಯಲ್ಲಿ ೫.೫೦ ಎಕರೆ ಜಾಗ ಪೊನ್ನಣ್ಣ ಒಡೆತನದಲ್ಲಿದೆ.