ಮಡಿಕೇರಿ, ಏ. ೧೮: ಮಹಿಳೋದಯ ಮಹಿಳಾ ಒಕ್ಕೂಟದ ವತಿಯಿಂದ ಮಡಿಕೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ನಿವೃತ್ತ ಕಾರ್ಯಕರ್ತೆ ಲೀನಾ ಲೋಬೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂತ ಮೈಕಲರ ಚರ್ಚ್ ಧರ್ಮಗುರು ಜಾರ್ಜ್ ದೀಪಕ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಮಹಿಳೆ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಪ್ರತಿ ಮಹಿಳೆಯರು ನಾಯಕತ್ವಗುಣ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳ್ಳುವಂತೆ ಕರೆ ನೀಡಿದರು.
ವಕೀಲೆ ವಿಲೀನ ಕುಮಾರಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಮಹಿಳೆಯರಿಗೆ ಕಾನೂನು ನೆರವು ದೊರೆಯುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಸಂಸ್ಥೆಯ ನಿವೃತ್ತ ಕಾರ್ಯಕರ್ತೆ ಲೀನಾ ಲೋಬೋ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ, ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮೆನೆಜೇಸ್, ಕಾರ್ಯಕರ್ತ ವಿಜಯ ನಾರಾಯಣ, ಜಿಲ್ಲಾ ಕಾನೂನು ಪ್ರಾಧಿಕಾರದ ಸಿಬ್ಬಂದಿ ಜಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು. ತಾರ ಸ್ವಾಗತಿಸಿ, ಮೀನಾಕುಮಾರಿ ವಂದಿಸಿದರು.