(ಕೆ.ಎಂ. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಏ. ೧೮: ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಆರ್. ಗುಂಡೂರಾವ್ ಅವರನ್ನು ೧೯೮೩ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎ. ಜೀವಿಜಯ ಅವರು ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
ತಮ್ಮ ಜೀವನದಲ್ಲಿ ಮುಖ್ಯಮಂತ್ರಿಯನ್ನು ಸೋಲಿಸಿ ವಿಧಾನಸಭೆಗೆ ಪ್ರವೇಶಿಸಿದ ಶಾಸಕ ಎಂಬ ಹೆಗ್ಗಳಿಕೆ ಇಂದಿಗೂ ಕೂಡ ಕೊಡಗು ಜಿಲ್ಲೆಯ ಒಕ್ಕಲಿಗರ ಪ್ರಭಾವಿ ನಾಯಕ ಬಿ.ಎ. ಜೀವಿಜಯ ಅವರಿಗೆ ಇದೆ.
೧೯೭೮ ರಿಂದ ನಿರಂತರವಾಗಿ ಚುನಾವಣಾ ಕಣದಲ್ಲಿರುವ ಬಿ.ಎ. ಜೀವಿಜಯ ತಮ್ಮ ಮೊದಲ ಚುನಾವಣೆಯಲ್ಲಿ ಆರ್. ಗುಂಡೂರಾವ್ ವಿರುದ್ಧವೇ ಸೋಲು ಕಂಡಿದ್ದರು.
ನAತರ ೧೯೮೩ ರಲ್ಲಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ದಿವಂಗತ ಆರ್. ಗುಂಡೂರಾವ್ ಅವರನ್ನು ಸೋಲಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದರು.
೧೯೭೮ ರಿಂದ ೨೦೧೮ ವರೆಗೂ ಕೂಡ ನಿರಂತರವಾಗಿ ಚುನಾವಣಾ ಅಖಾಡದಲ್ಲಿರುವ ಜೀವಿಜಯ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.
ಜೀವಿಜಯ ಸ್ಪರ್ಧಿಸದ ಮೊದಲ ಚುನಾವಣೆ ಹೇಗಿರಲಿದೆ ಎಂಬ ಲೆಕ್ಕಾಚಾರ ಕೂಡ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಒಟ್ಟು ವಿವಿಧ ಐದು ಪಕ್ಷಗಳಿಂದ ೧೧ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿ.ಎ. ಜೀವಿಜಯ ಕೇವಲ ಮೂರು ಬಾರಿ ಮಾತ್ರ ಗೆಲುವು ಪಡೆದಿದ್ದು, ಎಂಟು ಬಾರಿ ಸೋಲು ಕಂಡಿದ್ದಾರೆ.
ಅತೀ ಹೆಚ್ಚು ಚುನಾವಣೆಯಲ್ಲಿ ಸೋಲು ಕಂಡ ನಾಯಕರ ಸಾಲಿನಲ್ಲಿ ಜೀವಿಜಯ ಅವರು ಕೂಡ ಮೊದಲ ಪಟ್ಟಿಗೆ ಸೇರುತ್ತಾರೆ. ಒಟ್ಟು ಎಂಟು ಬಾರಿ ಸೋಮವಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎ. ಜೀವಿಜಯ ೧೯೮೩, ೧೯೮೫ರಲ್ಲಿ ಹಾಗೂ ೨೦೦೪ರಲ್ಲಿ ಗೆಲುವು ಪಡೆದಿದ್ದರು. ಉಳಿದ ಎಲ್ಲಾ ಚುನಾವಣೆಯಲ್ಲಿ ಕೂಡ ಸೋಲು ಕಂಡಿದ್ದರು. ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕವೂ ಕೂಡ ನಿರಂತರವಾಗಿ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ೨೦೦೮ರಲ್ಲಿ ಕಾಂಗ್ರೆಸ್ ಹಾಗೂ ೨೦೧೩, ೧೮ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎ. ಜೀವಿಜಯ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಬಿ.ಎ. ಜೀವಿಜಯ ಅವರಿಗೆ ಪಕ್ಷಾಂತರವೇ ಬಹುತೇಕ ಚುನಾವಣೆಯಲ್ಲಿ ಮುಳುವಾಗಿತ್ತು ಎಂಬ ಮಾತೂ ಇದೆ.
೧೯೯೯ರಲ್ಲಿ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ೩೨,೧೯೫ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ೧೯೯೪ ರಿಂದ ೨೦೧೮ರ ವರೆಗೂ ಕೂಡ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿರುವ ಬಿ.ಎ. ಜೀವಿಜಯ ೨೦೦೪ರಲ್ಲಿ ಒಮ್ಮೆ ಮಾತ್ರ ಅಪ್ಪಚ್ಚುರಂಜನ್ ವಿರುದ್ಧ ಗೆಲುವು ಪಡೆದಿದ್ದರು. ತಮ್ಮ ಚುನಾವಣಾ ರಾಜಕೀಯದಲ್ಲಿ ಹಾಲಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧವೇ ಅತೀ ಹೆಚ್ಚು ಬಾರಿ ಸೋಲು ಕಂಡಿರುವ, ಜೀವಿಜಯ ಅವರು ರಂಜನ್ ಅವರಿಗೆ ಪ್ರತೀ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ ಸಣ್ಣ ಮತಗಳ ಅಂತರದಿAದ ಸೋಲು ಕಾಣುತ್ತಿದ್ದರು.
ಒಕ್ಕಲಿಗರ ಪ್ರಭಾವಿ ನಾಯಕ!
ಬಿ.ಎ. ಜೀವಿಜಯ ಅವರು ಕೊಡಗು ಜಿಲ್ಲೆಯ ಒಕ್ಕಲಿಗ ಗೌಡ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರು. ಜೀವಿಜಯ ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಹೊಂದಿರುವ ನಾಯಕ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಇತರರ ಬೆವರು ಇಳಿಸುವಷ್ಟು ಮತಗಳನ್ನು ಪಡೆದುಕೊಳ್ಳುವ ಶಕ್ತಿ ಹೊಂದಿರುವ ನಾಯಕ. ಇದಕ್ಕೆ ೧೯೯೯ರ ಚುನಾವಣೆ ಸಾಕ್ಷಿಯಾಗಿದೆ.
ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು ನಾಯಕರು ಮಾತ್ರ ತಮ್ಮ ಸ್ವಯಂ ವರ್ಚಸ್ಸಿನ ಮೂಲಕ ಮತಗಳನ್ನು ಪಡೆಯುವ ಶಕ್ತಿ ಹೊಂದಿರುವವರು. ಇವರ ಸಾಲಿನಲ್ಲಿ ಬಿ.ಎ ಜೀವಿಜಯ ಅವರು ಕೂಡ ಒಬ್ಬರು.
ಇಂದಿಗೂ ಕೂಡ ಮಡಿಕೇರಿ ಕ್ಷೇತ್ರದಲ್ಲಿ ಜೀವಿಜಯ ಅವರು ಹೇಳುವ ಪಕ್ಷಕ್ಕೆ ಮತ ನೀಡುವ ಸಹಸ್ರಾರು ಮತದಾರರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಬಿ.ಎ. ಜೀವಿಜಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ, ಯುವಕ ಡಾ. ಮಂಥರ್ ಗೌಡ ಅವರಿಗೆ ಮಣೆ ಹಾಕಿದೆ.
೨೦೨೦ರಲ್ಲಿ ಜೀವಿಜಯ ಅವರು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹೊರಗಿನವರಿಗೆ ಟಿಕೆಟ್ ನೀಡಬೇಡಿ ಎಂದೂ ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದರು.
ಇದೀಗ ಮಂಥರ್ ಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ಜೀವಿಜಯ ಅವರು ಈ ಬಾರಿಯ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮಡಿಕೇರಿ ಕ್ಷೇತ್ರದಲ್ಲಿ ಬಿ.ಎ ಜೀವಿಜಯ ಅವರ ಬೆಂಬಲವಿಲ್ಲದೆ ಗೆಲುವು ಕಷ್ಟಸಾಧ್ಯ ಎನ್ನುತ್ತಾರೆ ರಾಜಕೀಯ ಪಂಡಿತರು.
ಸುದೀರ್ಘ ೫೫ ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಹಿರಿಯ ರಾಜಕಾರಣಿ ಬಿ.ಎ. ಜೀವಿಜಯ ಅವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಅನಾರೋಗ್ಯ ಹಾಗೂ ವಯಸ್ಸು ಕೂಡ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಲು ಕಾರಣ ಎನ್ನಲಾಗುತ್ತಿದೆ. ಮಡಿಕೇರಿ ಕ್ಷೇತ್ರದಲ್ಲಿ ಜೀವಿಜಯ ಸ್ಪರ್ಧಿಸದ ಚುನಾವಣೆ ಹೇಗಿರಲಿದೆ ಎಂಬುವುದು ಈ ಬಾರಿಯ ಕುತೂಹಲಗಳಲ್ಲಿ ಒಂದಾಗಿದೆ.