ಶನಿವಾರಸಂತೆ, ಏ. ೧೭: ಪಟ್ಟಣದ ತ್ಯಾಗರಾಜ ಕಾಲೋನಿ ಯಲ್ಲಿರುವ ಶ್ರೀಚಾಮುಂಡೇಶ್ವರಿ -ಗುಳಿಗ ದೈವದ ಕ್ಷೇತ್ರದಲ್ಲಿ ಶುಕ್ರವಾರ- ಶನಿವಾರ ೨ ದಿನಗಳ ಕಾಲ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕ್ಷೇತ್ರದಲ್ಲಿ ದಾನಿ ಕೋಟಿಪೂಜಾರಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ ದೈವದ ಪೂಜೆಯನ್ನು ಉಮಾವತಿ ಕರ್ಕೇರ ಕುಟುಂಬಸ್ಥರು ಹಾಗೂ ಜಾಗದ ಅಧಿಪತಿ ನರೇಶ್ಚಂದ್ರ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ.

ವಾರ್ಷಿಕೋತ್ಸವ ಪ್ರಯುಕ್ತ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಶ್ರೀ ಗಣಪತಿ ಪೂಜೆ, ಮಹಾಸಂಕಲ್ಪ, ಗಣಪತಿ ಹೋಮ, ದುರ್ಗಾ ಹೋಮ, ನವಕ ಕಲಶ ಪೂಜೆ, ಮಹಾಮಂಗಳಾರತಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ತೀರ್ಥ-ಪ್ರಸಾದ ವಿನಿಯೋಗ ವಾಯಿತು.

ಪ್ರಧಾನ ಅರ್ಚಕ ಜಗದೀಶ್ ಉಡುಪ, ಅರ್ಚಕರಾದ ಹರಿಭಟ್ಟರು, ಮಯೂರ ಭಟ್ಟರು ಪೂಜಾ ವಿಧಿಗಳನ್ನು ನೆರವೇರಿಸಿದರು. ಶನಿವಾರಸಂತೆ ಪಟ್ಟಣ, ತ್ಯಾಗರಾಜ ಕಾಲೋನಿ, ಅಕ್ಕಪಕ್ಕದ ಗ್ರಾಮಗಳ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಶನಿವಾರ ಬೆಳಿಗ್ಗೆ ಹರಕೆ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ಕುಟುಂಬಸ್ಥರಾದ ರಾಜೇಶ್ ಕೋಟ್ಯಾನ್, ಪ್ರಕಾಶ್ಚಂದ್ರ, ಸಂತೋಷ್ ಹಾಗೂ ಸುಮಂತ್ ನೇತೃತ್ವದಲ್ಲಿ ನೇರವೇರಿದವು. ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗವಾಯಿತು.