ನಾಪೋಕ್ಲು, ಏ. ೧೭: ಸಮೀಪದ ಕಕ್ಕುಂದಕಾಡು ಪೌರಾಣಿಕ ಹಿನ್ನೆಲೆಯ ಶ್ರೀ ಕರಿಚಾಮುಂಡಿ ದೈವದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ತಕ್ಕ ಮುಖ್ಯಸ್ಥ ಸೂರ್ಯಕುಮಾರ್ ಅವರ ಮನೆಯಿಂದ ಭಕ್ತಾದಿಗಳೊಂದಿಗೆ ಕರಿಚಾಮುಂಡಿ ದೇವಸ್ಥಾನಕ್ಕೆ ದೈವದ ಆಯುಧ ಹಾಗೂ ವಸ್ತç ಆಭರಣಗಳಿರುವ ಭಂಡಾರವನ್ನು ತರಲಾಯಿತು. ನಂತರ ರಾತ್ರಿ ತೋತ, ಚನ್ನಾಲೆಮೂರ್ತಿ, ತಮ್ಮಚ್ಚ ಪೊಟ್ಟು ಗುಳಿಗ, ಕೊರತಿ, ಅಂಗಾರೆ ನಡೆಯಿತು. ಭಾನುವಾರ ಬೆಳಿಗ್ಗೆ ಗುಳಿಗ, ಮಧ್ಯಾಹ್ನ ಕರಿ ಚಾಮುಂಡಿ ಕೋಲ ನಡೆಯಿತು. ವರ್ಷಕೊಮ್ಮೆ ವಿಶು ಸಂಕ್ರಮಣ ದಂದು ನಡೆಯುವ ದೈವಗಳ ಕೋಲವನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ವೀಕ್ಷಿಸಿ, ಹರಕೆ ಕಾಣಿಕೆ ಒಪ್ಪಿಸಿ ದೈವದ ಪ್ರಸಾದ ಆಶೀರ್ವಾದ ಪಡೆದುಕೊಂಡರು.