ವೀರಾಜಪೇಟೆ, ಏ. ೧೮: ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೆತಪತ್ರ ಹೊರಡಿಸಲಿ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಆಗ್ರಹಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್‌ನಿAದ ವೀರಾಜಪೇಟೆಯ ಸೆರೆನಿಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಎ.ಎಸ್ ಪೊನ್ನಣ್ಣ, ೨೦ ವರ್ಷಗಳಿಂದ ನೀವೇನು ಮಾಡಿದ್ದೀರಾ ಎಂಬುದನ್ನು ಜನತೆಯ ಮುಂದೆ ಬಹಿರಂಗಪಡಿಸಿ ಎಂದು ಬಿಜೆಪಿ ಶಾಸಕರಿಗೆ ಸವಾಲೆಸೆದರು.

ಅಭಿವೃದ್ಧಿ ಆಧಾರದ ಮೇಲೆ, ವ್ಯಕ್ತಿಯ ಸೌಜನ್ಯತೆಯ ಮೇಲೆ ಈ ಬಾರಿಯ ಚುನಾವಣೆ ಎದುರಿಸಲಿದ್ದೇವೆ. ಕೇಂದ್ರ, ರಾಜ್ಯ, ಜಿಲ್ಲೆ ಮೂರು ಕಡೆಯಲ್ಲೂ ನಿಮ್ಮದೇ ಸರಕಾರವಿದ್ದರೂ ಏನು ಸಾಧನೆ ಮಾಡಿದ್ದೀರಿ, ಈ ಚುನಾವಣೆ ಅಭಿವೃದ್ಧಿ ಆಧಾರದ ಮೇಲೆ ನಡೆದರೆ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ನಾನು ನಮ್ಮ ಸಂವಿಧಾನದ ಆಶಯಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ರಾಜಕೀಯ ಹಿನ್ನೆಲೆ ಇರದ ಪಕ್ಷೇತರರು ಹುಟ್ಟಿಕೊಳ್ಳುತ್ತಿದ್ದಾರೆ. ಇದೆಲ್ಲಾ ಕುತಂತ್ರ ಎಂಬುದು ಬಹಿರಂಗ ಸತ್ಯ, ಅಭಿವೃದ್ಧಿಯ ಕುರಿತು ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದವರಿಗೆ ಮತದಾನದ ಮೂಲಕ ಮತದಾರರು ಉತ್ತರ ನೀಡಬೇಕಿದೆ ಎಂದು ಎ.ಎಸ್. ಪೊನ್ನಣ್ಣ ಕರೆ ನೀಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಮಾನವರಾಗಲು ಕಾಂಗ್ರೆಸ್ ಕಾರಣ, ನಾಮಪತ್ರ ಸಲ್ಲಿಕೆ ಬಳಿಕ ಪರಿಶಿಷ್ಟ ಜಾತಿ ಸಮಾವೇಶ ಆಯೋಜಿಸಿರುವುದು ಕಾಂಗ್ರೆಸ್ ಮೂಲ ಮತದಾರರಿಗೆ, ದಲಿತ ಸಮುದಾಯಕ್ಕೆ ನೀಡಿದ ಗೌರವ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಬಡವರ, ದಲಿತರ ಏಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಈ ನಿಟ್ಟಿನಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಕರೆ ನೀಡಿದರು.

ತಳಸಮುದಾಯದವರು ಉಳಿಯಬೇಕು, ಅಭಿವೃದ್ಧಿ ಹೊಂದಬೇಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಚುನಾವಣಾ ವೀಕ್ಷಕರಾದ ಶಿವಲಿಂಗಯ್ಯ, ರಾಜಶೇಖರ್ ಹಾಗೂ ತಮ್ಮಯ್ಯ ಮಾತನಾಡಿದರು. ಕಾಂಗ್ರೆಸ್ಸಿನ ಪರಿಶಿಷ್ಟ ಜಾತಿ ಪಂಗಡ ಘಟಕದ ಜಿಲ್ಲಾಧ್ಯಕ್ಷ ಬಿ.ಇ. ಜಯೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಮೊದಲಿಗೆ ಅಗಲಿದ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷರಾಗಿದ್ದ ಎಸ್.ಎನ್. ರಾಜಾರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸಮಾವೇಶದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ, ಮುಖಂಡರಾದ ಹೆಚ್.ಎಸ್. ಚಂದ್ರಮೌಳಿ, ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ಸುರಯ್ಯ ಅಬ್ರಾರ್, ಕೆ.ಪಿ. ಚಂದ್ರಕಲಾ, ಮಾಜಿ ಸಚಿವೆ ಸುಮಾ ವಸಂತ್, ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ವೀರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜಿ ಪೂಣಚ್ಚ, ಮಿದೇರಿರ ನವೀನ್, ಇಸ್ಮಾಯಿಲ್ ಸೇರಿದಂತೆ ಕಾಂಗ್ರೆಸ್ಸಿನ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಭಾಗಿಗಳಾದರು.