ಮಡಿಕೇರಿ, ಏ. ೧೭: ಕರ್ನಾಟಕ ದಲ್ಲಿ ಈ ಬಾರಿ ಬದಲಾವಣೆಯ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸ ಲಾಗಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ಞಾವಂತ ಅಭ್ಯರ್ಥಿಯಾದ ಡಾ. ಮಂಥರ್ ಗೌಡ ಹಾಗೂ ವೀರಾಜಪೇಟೆ ಕ್ಷೇತ್ರದಿಂದ ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ನಂತರ ಬಿಜೆಪಿ ತೊರೆದಿದ್ದ ಎ.ಕೆ. ಸುಬ್ಬಯ್ಯ ಪುತ್ರ ಎ.ಎಸ್. ಪೊನ್ನಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಜೀವಿಜಯ ಅವರ ಪುತ್ರ ಸೇರಿದಂತೆ ಚಂದ್ರಮೌಳಿ ಹಾಗೂ ಎಲ್ಲಾ ನಾಯಕರು ಸೇರಿ ಒಮ್ಮತದಿಂದ ಮಡಿಕೇರಿಯಲ್ಲಿ ಮಂಥರ್ ಗೌಡ ಅವರನ್ನು ಕಣಕ್ಕಿಳಿಸಿದ್ದೇವೆ. ಕೊಡಗಿನಲ್ಲಿ ೨೫ ವರ್ಷಗಳಿಂದ ನಡೆದು ಬಂದಿರುವ ಆಡಳಿತವನ್ನು ಬದಲಾಯಿಸಬೇಕೆಂದು ಜನ ಬಯಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್ನ ನಾಯಕರು, ಆಕಾಂಕ್ಷಿ ಗಳಾಗಿದ್ದವರು, ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ನ ಗೆಲುವೊಂದೇ ಅವರೆಲ್ಲರ ಗುರಿಯಾಗಿದೆ ಎಂದು ಶಿವಕುಮಾರ್ ಹೇಳಿದರು.
ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಸೇರಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ, ಬೆಂಗಳೂರು ನಗರ ಎಂಎಲ್ಸಿ ಪುಟ್ಟಣ್ಣ, ಮಾಜಿ ಸಚಿವ ಜೀವಿಜಯ ಅವರು ಸೇರಿದಂತೆ ಸಾಕಷ್ಟು ಮಂದಿ ತಾನು ಕಾಂಗ್ರೆಸ್ ಅಧ್ಯಕ್ಷನಾದ ಬಳಿಕ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಹೆಚ್.ವಿಶ್ವನಾಥ್ ಅವರೂ ಕೂಡ ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಕಾಂಗ್ರೆಸ್ಗೆ ಸೇರುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರುಗಳು ದಡ್ಡರಲ್ಲ; ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಅವರುಗಳಿಗೆ ಗೊತ್ತಿರುವುದರಿಂದ ಅವರೆಲ್ಲರೂ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದಾರೆ. ಇದು ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿ ರುವುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಈ ದೇಶದ ಶಕ್ತಿಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರೂ ಅಧಿಕಾರಕ್ಕೆ ಬಂದAತೆ ಎಂದು
ಡಿಕೆಶಿ ನುಡಿದರು.
(ಮೊದಲ ಪುಟದಿಂದ) ಮೇ ೧೦ ಕೇವಲ ಮತದಾನದ ದಿನವಲ್ಲ; ೪೦% ಕಮಿಷನ್ ಕಳಂಕ ಹೊತ್ತಿರುವ ಸರ್ಕಾರವನ್ನು ನಿರ್ಮೂಲನೆ ಮಾಡಿ ಭ್ರಷ್ಟಾಚಾರವನ್ನು ಬಡಿದೋಡಿಸುವ ದಿನವಾಗಲಿದೆ ಎಂದು ಶಿವಕುಮಾರ್ ಹೇಳಿದರು. ಬೆಲೆ ಏರಿಕೆ, ಆರ್ಥಿಕ ತೊಂದರೆ ಇನ್ನಿತ್ಯಾದಿ ಸಮಸ್ಯೆಗಳಿಂದ ಜನರು ತತ್ತರಿಸಿಹೋಗಿದ್ದಾರೆ. ರೈತರ ಆದಾಯ ಹೆಚ್ಚು ಮಾಡುತ್ತೇವೆ; ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ಯಾವುದನ್ನೂ ಮಾಡಲಿಲ್ಲ. ಇದಕ್ಕೆ ಮತದಾರರು ಮೇ ೧೦ರಂದು ಉತ್ತರ ಕೊಡಬೇಕು. ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಆದರೆ ಅವಕಾಶಗಳನ್ನು ಕೊಡುತ್ತಾನೆ. ಮೇ ೧೦ರ ಅವಕಾಶವನ್ನು ಮತದಾರರು ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಮನವಿ ಮಾಡಿದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚಂದ, ‘ಕೈ’ ಅಧಿಕಾರದಲ್ಲಿದ್ದರೆ ಚಂದ ಎಂಬುದಾಗಿ ತನಗೆ ಬಾಲಕನೋರ್ವ ಹಲವು ದಿನಗಳ ಹಿಂದೆ ಸಂದೇಶವೊAದನ್ನು ಕಳುಹಿಸಿದ್ದ. ಅದರಂತೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ಸರ್ವರಿಗೂ ಒಳಿತು ಎಂದು ಶಿವಕುಮಾರ್ ನುಡಿದರು. ಬಿಜೆಪಿ ಆಡಳಿತ ವೈಫಲ್ಯದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ನಿAದ ೨೦೦ ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಮಹಿಳೆಗೆ ೨ ಸಾವಿರ ಮಾಸಿಕ ನೆರವು, ೧೦ ಕೆ.ಜಿ. ಅಕ್ಕಿ ಸೇರಿದಂತೆ ಕೆಲ ಭರವಸೆಗಳನ್ನು ಒಳಗೊಂಡ ಗ್ಯಾರಂಟಿಕಾರ್ಡ್ ಅನ್ನು ಈಗಾಗಲೇ ಮತದಾರರಿಗೆ ವಿತರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಒಂದು ತಿಂಗಳ ಒಳಗಾಗಿ ಗ್ಯಾರಂಟಿ ಕಾರ್ಡ್ನಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸಲಾಗುತ್ತದೆ. ಭರವಸೆ ಈಡೇರಿಸದಿದ್ದರೆ ಮತ್ತೊಮ್ಮೆ ನಿಮ್ಮ ಬಳಿ ಬಂದು ನಾವು ಮತ ಕೇಳುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ವೈಫಲ್ಯಗಳನ್ನು ಮತದಾರರ ಮುಂದಿಡಬೇಕು. ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ; ಗಲಭೆ, ಭ್ರಷ್ಟಾಚಾರ ಅನ್ಯಾಯ ಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಮಂಥರ್ಗೌಡ ಮಾತನಾಡಿ, ದುರಾಡಳಿತವನ್ನು ಹೋಗಲಾಡಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧವಾಗಿದ್ದಾರೆ ಎಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಹಾಲಿ ಶಾಸಕರನ್ನು ಬದಲಾಯಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಪಣತೊಡಬೇಕೆಂದರು. ಕುಶಾಲನಗರ ಬ್ಲಾಕ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಜಿಲ್ಲೆಯಲ್ಲಿ ಬದಲಾವಣೆ ತರುವ ಮೂಲಕ ಮತದಾರರು ಪ್ರಜ್ಞಾವಂತರೆನಿಸಿಕೊಳ್ಳಬೇಕಿದೆ ಎಂದರು. ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಮಾತನಾಡಿ, ಧರ್ಮಗಳ ನಡುವೆ ದ್ವೇಷ ಸೃಷ್ಟಿಸಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಸಮಾನತೆ ಕಾಂಗ್ರೆಸ್ನ ಧ್ಯೇಯವಾಗಿದೆ ಎಂದರು. ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಸಾಧಿಸಲಿದ್ದು, ಭ್ರಷ್ಟಾಚಾರ ರಹಿತ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು. ಹರಪಳ್ಳಿ ರವೀಂದ್ರ ಮಾತನಾಡಿ, ಕಾಂಗ್ರೆಸ್ನಿAದ ಮಾತ್ರ ಕೊಡಗಿನಲ್ಲಿ ಅಭಿವೃದ್ಧಿ ಸಾಧ್ಯ ಎಂದರು. ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪಗೌಡ, ಕೆಪಿಸಿಸಿ ಸದಸ್ಯ ಯಾಕೂಬ್, ಸಂಯೋಜಕ ನಟೇಶ್ ಗೌಡ, ಡಿಸಿಸಿ ಉಪಾಧ್ಯಕ್ಷ ಅನಂತಕುಮಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿ.ಪಂ. ಮಾಜಿ ಸದಸ್ಯ ಲತೀಫ್ ಮತ್ತಿತರರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪಣತೊಡಬೇಕೆಂದು ಹೇಳಿದರು. ಎಐಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, ಮೈಸೂರು ವಿಭಾಗೀಯ ಉಸುವಾರಿ ನಿಧಿ ಚತುರ್ವೇದಿ, ಮಾಜಿ ಸಚಿವೆ ಸುಮಾವಸಂತ್, ಕೆಪಿಸಿಸಿ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್, ಕೆಪಿಸಿಸಿ ಸದಸ್ಯೆ ಸರಿತಾ ಪೂಣಚ್ಚ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೇ ವೇಳೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಸ್ವಾಗತಿಸಿ, ವಕ್ತಾರ ತೆನ್ನೀರ ಮೈನಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ದಳದ ಕಾರ್ಯಕರ್ತರು ವಂದೇ ಮಾತರಂ ಹಾಡಿದರು.