ಕಳೆದ ವರ್ಷವಷ್ಟೇ ನೈಜೀರಿಯಾ ದೇಶದಿಂದ, ಭಾರತದಲ್ಲಿ ಅಳಿದುಹೋಗಿದ್ದ ಚೀತಾಗಳನ್ನು ತರಿಸಿ ಅವುಗಳಿಗೆ ಆಶ್ರಯ ನೀಡಿ ಅವುಗಳ ಸಂಖ್ಯೆ ವೃದ್ಧಿಗೆ ಶ್ರಮಪಟ್ಟ ಭಾರತ ಇದೀಗ ಭಾರತದಲ್ಲಿ ಸಮೃದ್ಧವಾಗಿ ಹರಡಿರುವ, ಸಂಖ್ಯಾಬಲ ಕೂಡ ಹೆಚ್ಚಿರುವ ಹುಲಿಗಳನ್ನು ಇತರ ದೇಶಕ್ಕೆ ರವಾನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಆಗ್ನೇಯ ಏಷಿಯಾದಲ್ಲಿನ ಕ್ಯಾಂಬೋಡಿಯಾ ದೇಶವು ಹುಲಿಗಳು ನೆಲೆಸಲು ಸೂಕ್ತ ಪ್ರದೇಶವಾಗಿದೆ. ೨೦೦೭ರಲ್ಲಿ ಅಲ್ಲಿ ಹುಲಿ ಸಂತತಿಯು ಸಂಪೂರ್ಣವಾಗಿ ನಶಿಸಿಹೋಗಿದ್ದು, ಇದೀಗ ಮತ್ತೇ ಹುಲಿಗಳನ್ನು ಅಲ್ಲಿ ಪರಿಚಯಿಸುವ ಯೋಜನೆಯನ್ನು ರೂಪಿಸಲು ಕ್ಯಾಂಬೋಡಿಯಾ ಸರಕಾರ ಉದ್ದೇಶಿಸಿದೆ. ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ಅಧಿಕಾರಿಗಳು ಕ್ಯಾಂಬೋಡಿಯಾ ದೇಶದ ಕನಸಾಗಿರುವ ಹುಲಿಗಳ ಪುನಶ್ಚೇತನಕ್ಕೆ ಪಣತೊಡುತ್ತಿದ್ದಾರೆ. ಯಶಸ್ವಿಯಾದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಹುಲಿಯನ್ನು ಈ ರೀತಿ ಬೇರೆ ದೇಶದಲ್ಲಿ ವೃದ್ಧಿಗೊಳಿಸುವ ಯೋಜನೆಯ ಪಾತ್ರದಾರಿಗಳು ಎಂಬ ಹಗ್ಗಳಿಕೆಗೆ ಭಾರತ ಹಾಗೂ ಕ್ಯಾಂಬೋಡಿಯಾ ಸಾಕ್ಷಿಯಾಗಲಿದೆ.
ಕ್ಯಾಂಬೋಡಿಯಾದ ಟಟಾಯ್ ರಾಷ್ಟಿçÃಯ ಉದ್ಯಾನವನದ ೯೦ ಏಕ್ರೆ ಪ್ರದೇಶವು ಭಾರತದ ಹುಲಿಗಳಿಗೆ ಆಶ್ರಯವಾಗಲಿದೆ. ಅಲ್ಲಿ ಕಳುಹಿಸಲಾಗುವ ಹುಲಿಗಳಿಗೆ ಆಹಾರ, ಅವುಗಳ ಭದ್ರತೆ ದೃಷ್ಟಿಯಿಂದ ಕ್ಯಾಂಬೋಡಿಯಾ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇನ್ನೂ ಚರ್ಚೆಗಳು ನಡಯುತ್ತಿವೆ. ತದನಂತರವಷ್ಟೇ ಎಷ್ಟು ಹುಲಿಗಳನ್ನು ಅಲ್ಲಿಗೆ ಕಳುಹಿಸಬಹುದೆಂಬುದಾಗಿ ನಿಶ್ಚಯಿಸಲಾಗುವುದು ಎಂದು ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ಎಸ್.ಪಿ ಯಾದವ್ ಅವರು ಮಾಹಿತಿ ನೀಡಿದ್ದಾರೆ. ಕಳೆದ ೧೫ ವರ್ಷಗಳಲ್ಲಿ ಕ್ಯಾಂಬೋಡಿಯಾದಲ್ಲಿ ಯಾವುದೇ ಹುಲಿಗಳ ಇರುವಿಕೆಯ ಸುಳಿವು ದೊರೆತಿಲ್ಲ. ೨೦೦೭ರಲ್ಲಿ ಹುಲಿಯೊಂದರ ಚಿತ್ರ ಸೆರೆಯಾಗಿದ್ದು, ಅದಾದ ಬಳಿಕ ಹುಲಿಯ ಯಾವುದೇ ಸುಳಿವು ಈ ದೇಶದಲ್ಲಿ ದೊರೆತಿಲ್ಲ.
ಕ್ಯಾಂಬೋಡಿಯಾವು ಈ ಹಿಂದೆ ಹುಲಿ ಸಂಖ್ಯೆಯಲ್ಲಿ ವಿಶ್ವದಲ್ಲೇ ೨ನೆ ಸ್ಥಾನ ಪಡೆದುಕೊಂಡಿತ್ತು. ಅನಧಿಕೃತ ಬೇಟೆಯಿಂದಾಗಿ ಇದೀಗ ಅವುಗಳ ಸಂತತಿ ಶೂನ್ಯವಾಗಿದೆ. ಆದ್ದರಿಂದ ಪ್ರಸ್ತುತ ಅಲ್ಲಿಗೆ ಭಾರತದಿಂದ ಕಳುಹಿಸಬೇಕೆಂದು ಉದ್ದೇಶಿಸಿರುವ ಹುಲಿಗಳಿಗೆ ಭದ್ರತೆ, ಸಂಖ್ಯಾವೃದ್ಧಿಗೆ ಕ್ಯಾಂಬೋಡಿಯಾ ತಯಾರಾಗಿದ್ದರೆ ವರ್ಷದ ಕೊನೆಯೊಳಗೆ ಅಲ್ಲಿಗೆ ಹುಲಿಗಳು ರವಾನೆಯಾಗಲಿವೆ.
ಭಾರತದಲ್ಲಿ ೩,೧೬೭ ಹುಲಿಗಳು
ಸರಕಾರವು ಹುಲಿ ಸಂರಕ್ಷಣೆಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಒತ್ತು ನೀಡುತ್ತಿರುವ ಪರಿಣಾಮ ಕಳೆದ ೪ ವರ್ಷಗಳಲ್ಲಿ ಸಂಖ್ಯೆಯಲ್ಲಿ ೨೦೦ ಹುಲಿಗಳು ಹೆಚ್ಚಾಗಿವೆ. ಇದೀಗ ಒಟ್ಟು ಸಂಖ್ಯೆ ೩,೧೬೭ ತಲುಪಿದೆ. ವಿಶ್ವದಲ್ಲಿನ ಹುಲಿಗಳ ಪೈಕಿ ಶೇ.೭೫ ರಷ್ಟು ಹುಲಿಗಳು ಭಾರತದಲ್ಲೇ ಇವೆ. ದೇಶದಲ್ಲಿ ನಶಿಸಿ ಹೋಗಿದ್ದ ಚೀತಾ ಪುನಶ್ಚೇತನಕ್ಕೆ ಒತ್ತು ನೀಡಿ ಅದರ ಸಂಖ್ಯೆಯನ್ನು ವೃದ್ಧಿಸಲು ಪ್ರಯತ್ನಿಸುತ್ತಿರುವ ಭಾರತ ಇದೀಗ ದೇಶದಲ್ಲಿ ಸಂಖ್ಯೆಯಲ್ಲಿ ಹೆಚ್ಚಿರುವ ಹುಲಿಗಳನ್ನು ಕ್ಯಾಂಬೋಡಿಯಾಗೆ ರವಾನಿಸುವ ಮೂಲಕ ನಶಿಸಿಹೋಗಿರುವ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪುನಶ್ಚೇತನಕ್ಕೆ ಪಣತೊಟ್ಟಂತಾಗಿದೆ.