ಮಡಿಕೇರಿ, ಏ. ೧೪; ಬಸ್ಸಲ್ಲಿ ಬಿದ್ದು ಸಿಕ್ಕಿದ ಚಿನ್ನದ ನೆಕ್ಲೆಸ್ ಅನ್ನು ಕಳೆದುಕೊಂಡ ಮಹಿಳೆಗೆ ಹಿಂತಿರುಗಿಸಿ ಪ್ರಾಮಾಣಿಕತೆಗೆ ಬಸ್ ಕಂಡಕ್ಟರ್ ಸಾಕ್ಷಿಯಾಗಿದ್ದಾರೆ.
ನಿನ್ನೆ ದಿನ ಬೆಳಿಗ್ಗೆ ಕೊಡ್ಲಿಪೇಟೆಯಿಂದ ಕುಶಾಲನಗರ ಕಡೆಗೆ ತೆರಳುವ ಸಾರಿಗೆ ಸಂಸ್ಥೆ ಬಸ್ಗೆ(ಕೆಎ೧೯ ಎಫ್ ೩೨೧೬) ಕೊಡ್ಲಿಪೇಟೆಯ ಜಯಂತಿ ಎಂಬವರು ಹತ್ತಿದ್ದಾರೆ. ಬಸ್ಸನ್ನೇರುವ ಧಾವಂತದಲ್ಲಿ ಅವರ ಕತ್ತಿನಲ್ಲಿದ್ದ ೨೨ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಬಿದ್ದುಹೋಗಿದೆ. ಬಸ್ ಹೊರಡುವ ಮುನ್ನವೇ ಕತ್ತಿನಲ್ಲಿ ನೆಕ್ಲೆಸ್ ಇಲ್ಲದಿರುವದು ಗೊತ್ತಾಗಿದೆ. ಗಾಬರಿಯಿಂದ ತಡಕಾಡುತ್ತಿದ್ದ ಮಹಿಳೆಯನ್ನು ಗಮನಿಸಿದ ಕಂಡಕ್ಟರ್ ಜಿ.ವಿ. ಕಿರಣ್ ಎಂಬವರು ಏನಾಯಿತೆಂದು ವಿಚಾರಿಸಿದ್ದಾರೆ. ಈ ಸಂದರ್ಭ ನೆಕ್ಲೆಸ್ ಕಳೆದುಕೊಂಡಿರುವದನ್ನು ಜಯಂತಿ ಹೇಳಿದ್ದಾರೆ. ಬಳಿಕ ನೆಕ್ಲೆಸ್ ಬಗ್ಗೆ ಮಾಹಿತಿ ಪಡೆದು ಬಸ್ಸಿನಲ್ಲೇ ನೆಕ್ಲೆಸ್ ಅನ್ನು ಅವರಿಗೆ ಹಿಂತಿರುಗಿಸಿದ್ದಾರೆ.
- ಟಿ.ಜಿ.ಸತೀಶ್