ಕಣಿವೆ, ಏ. ೧೪: ಈ ಬಾರಿಯ ವರುಣನ ಮುನಿಸು ಕೇವಲ ಜನಜೀವನದ ಮೇಲೆ ಪರಿಣಾಮ ಬೀರುತ್ತಿಲ್ಲ. ಜನ ಜೀವನದ ಮೂಲ ದ್ರವ್ಯ ದನಗಳ ಮೇಲೂ ಘೋರ ಪರಿಣಾಮ ಬೀರುತ್ತಿದೆ.
ಬಿಸಿಲ ಝಳದಿಂದಾಗಿ ಬೀಡಾಡಿ ದನಗಳು ಹಾಗು ಕೃಷಿಕರು ಸಾಕಿರುವ ಜಾನುವಾರುಗಳ ಮೇವಿನ ಮೇಲು ಪರಿಣಾಮ ಬೀರಿದೆ. ಜಾನುವಾರುಗಳಿಗೆ ಅಲ್ಲಲ್ಲಿ ಸ್ವಾಭಾವಿಕವಾಗಿ ಸಿಗುತ್ತಿದ್ದ ಹಸಿರು ಮೇವು ಸಿಗದೇ ಪರದಾಡುವಂತಾಗಿದೆ. ಆಹಾರಕ್ಕಾಗಿ ದನಗಳು ಹಾಹಾಕಾರ ಪಡುವಂತಾಗಿದೆ.
ಶುAಠಿ ಬೆಳೆಯಿಂದಾಗಿ ಜಾನುವಾರುಗಳ ಅತ್ಯಂತ ಪ್ರಿಯವಾದ ಭತ್ತದ ಒಣ ಹುಲ್ಲಿಗೆ ಬೇಡಿಕೆ ಇರುವ ಕಾರಣ ಭತ್ತ ಬೆಳೆದ ಕೃಷಿಕರು ಭತ್ತದ ಒಣಹುಲ್ಲನ್ನು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿ ಜಾನುವಾರುಗಳನ್ನು ರಸ್ತೆಗೆ ಮೇಯಲು ಓಡಿಸುವುದೂ ಉಂಟು. ಈಗ ಮಳೆ ಇಲ್ಲದ ಕಾರಣ ಹಸಿರ ಹುಲ್ಲು ಹುಡುಕಿದರೂ ಸಿಗುತ್ತಿಲ್ಲ. ಅತ್ತ ಒಣ ಹುಲ್ಲು ಕೂಡ ಲಭಿಸುತ್ತಿಲ್ಲ. ಹಾಗಾಗಿ ಮೂಕ ಪ್ರಾಣಿಗಳ ರೋದನ ಒಂದು ರೀತಿ ಅರಣ್ಯ ರೋದನದಂತಾಗಿದೆ.
ಹಳ್ಳ, ಕೊಳ್ಳ, ನದಿ ದಂಡೆಗಳ ಅಲ್ಲಲ್ಲಿ ಹಸಿರೆಲೆ ಗಿಡಗಳನ್ನು ಅರಸುತ್ತಿರುವ ಜಾನುವಾರುಗಳು ಆಡು, ಕುರಿ - ಮೇಕೆಗಳ ರೀತಿಯಲ್ಲಿ ಹಸಿರೆಲೆಗಳನ್ನು ತ್ರಾಸಪಟ್ಟು ಹುಡುಕಿ ತಿನ್ನುವ ಪ್ರಯತ್ನದಲ್ಲಿ ರಾಸುಗಳು ಮಗ್ನವಾಗಿವೆ.
ಕೆಲವೊಂದು ಜಾನುವಾರುಗಳು ಮೇವು ಸಿಗದಿದ್ದರೂ ಕೊನೆ ಪಕ್ಷ ನೀರಾದರೂ ದೊರಕುವ ಸಂತಸದಲ್ಲಿ ನದಿ ತೀರದಲ್ಲಿ ಆಹಾರ ಹುಡುಕುತ್ತಿವೆ.
ಆದ್ದರಿಂದ ಮಳೆ ಬಿದ್ದು ಭೂಮಿಯಲ್ಲಿ ಹಸಿರು ಚಿಗುರೊಡೆಯುವವರೆಗೂ ಗೋವುಗಳ ಪ್ರೇಮಿಗಳು, ಪ್ರಾಣಿ ಪ್ರಿಯರು ತಮಗೆ ಸಿಗಬಹುದಾದ ಹುಲ್ಲು ಸೊಪ್ಪುಗಳನ್ನು ತಮಗೆ ಎದುರಾಗುವ ಜಾನುವಾರುಗಳಿಗೆ ನೀಡುವ ಮೂಲಕ ಮಾನವೀಯತೆ ತೋರುವ ಅನಿವಾರ್ಯತೆ ಇದೆ.