ಮಡಿಕೇರಿ, ಏ. ೧೩: ದಕ್ಷಿಣ ಕೊಡಗಿನ ಬಿರುನಾಣಿಯ ಶ್ರೀ ಪಾಕೇರಿನಾಡು ಪುತ್ತು ಭಗವತಿ ದೇವರ ವಾರ್ಷಿಕ ಉತ್ಸವಕ್ಕೆ ತಾ. ೧೨ ರಂದು ಸಂಭ್ರಮದ ತೆರೆಬಿತ್ತು. ತಾ. ೪ ರಂದು ಕೊಡಿಮರ ನಿಲ್ಲಿಸುವ ಮೂಲಕ ಉತ್ಸವ ಪ್ರಾರಂಭಗೊAಡಿದ್ದು, ತಾ. ೧೨ ರ ತನಕ ವಿವಿಧ ಪೂಜಾ ಕೈಂಕರ್ಯ, ಸಾಂಪ್ರದಾಯಿಕ ಆಚರಣೆಗಳು ಜರುಗಿದವು.

ಈ ದೇವಸ್ಥಾನದ ಉತ್ಸವದ ಸಂದರ್ಭ ವಿಶೇಷವಾಗಿ ‘ಪೊಮ್ಮಂಗಲ’ ಎಂಬ ಆಚರಣೆ ನಡೆಯುವುದು ಇಲ್ಲಿನ ವೈಶಿಷ್ಯಗಳಲ್ಲಿ ಒಂದಾಗಿದೆ. ಈ ಬಾರಿ ತಾ. ೧೧ ರಂದು ಪೊಮ್ಮಂಗಲ ಆಚರಣೆ ನಡೆಯಿತು. ಹೆಣ್ಣುಮಕ್ಕಳನ್ನು ಕೊಡವ ವರನ ಮಾದರಿಯಲ್ಲಿ ಹಾಗೂ ಗಂಡುಮಕ್ಕಳನ್ನು ವಧುವಿನಂತೆ ವೇಷ ಬದಲಿಸಿ ಕಟ್ಟುಪಾಡಿನ ವಿಧಿ - ವಿಧಾನಗಳಂತೆ ದೇವಿಗೆ ಹರಕೆ ಒಪ್ಪಿಸುವ ಪದ್ಧತಿ ಇದಾಗಿದೆ.

ಈ ಬಾರಿ ಹರಕೆ ಹೊತ್ತವರು ತಮ್ಮ ಹರಕೆ ಒಪ್ಪಿಸಿದರು. ಎಲ್ಲರನ್ನು ದುಡಿಕೊಟ್ಟ್ ಪಾಟ್‌ನೊಂದಿಗೆ ದೇವಾಲಯಕ್ಕೆ ಹತ್ತಿಸಿ ದೇವಸ್ಥಾನದ ಪ್ರದಕ್ಷಿಣೆಯೊಂದಿಗೆ ದೇವಿಗೆ ಹರಕೆ ಒಪ್ಪಿಸುವ ಪದ್ಧತಿ ನಡೆಸಲಾಯಿತು. ಉತ್ಸವದ ಅಂತಿಮ ದಿನವಾದ ತಾ. ೧೨ ರಂದು ಬೆಳಿಗ್ಗೆಯಿಂದ ನಡುರಾತ್ರಿಯ ತನಕವೂ ಉತ್ಸವ ಜರುಗಿತು. ಬೆಳಿಗ್ಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಸಂಜೆ ದೇವರ ದರ್ಶನ, ಅವಭೃತ ಸ್ನಾನ, ರಾತ್ರಿ ದೇವರ ನೃತ್ಯ, ದರ್ಶನ, ವಸಂತ ಪೂಜಾ ಕೈಂಕರ್ಯದೊAದಿಗೆ ಪ್ರಸಕ್ತ ಸಾಲಿನ ಉತ್ಸವ ಶ್ರದ್ಧಾಭಕ್ತಿಯಿಂದ ಮುಕ್ತಾಯಗೊಂಡಿತು.

ದೇವಾಲಯ ಸಮಿತಿ ಅಧ್ಯಕ್ಷರಾದ ಕಾಳಿಮಾಡ ಮುತ್ತಣ್ಣ, ಕಾರ್ಯದರ್ಶಿ ಕಳಕಂಡ ಜಿತು ಕುಶಾಲಪ್ಪ, ದೇವತಕ್ಕರಾದ ಅಣ್ಣಳಮಾಡ ಗಿರೀಶ್, ನಾಡ್ ತಕ್ಕರಾದ ಚಂಗಣಮಾಡ ಕುಟುಂಬಸ್ಥರು, ದೇವಾಲಯ ಆಡಳಿತ ಮಂಡಳಿ ಪ್ರಮುಖರು ಸೇರಿದಂತೆ ಬಿರುನಾಣಿ, ಪರಕಟಗೇರಿ, ಪೂಕಳ ಗ್ರಾಮದ ಜನರು, ಬಂಧುಮಿತ್ರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.