ಕಣಿವೆ, ಏ. ೧೩: ಮುಂಬರುವ ಮೇ ೧೦ ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬAಧ ಪ್ರತೀ ಜಿಲ್ಲಾ ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣಾ ಗೇಟುಗಳನ್ನು ಅಳವಡಿಸಲಾಗಿದೆ. ಅದರಂತೆಯೇ ಅಂತಹ ತಪಾಸಣಾ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿಗಳು, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕುಶಾಲನಗರ ತಾಲೂಕಿನ ಗಡಿ ಗ್ರಾಮ ಶಿರಂಗಾಲದಲ್ಲಿ ಹಿಂದಿನಿAದಲೂ ಒಂದು ತಪಾಸಣಾ ಕೇಂದ್ರವಿದೆ. ಅದು ಅವೈಜ್ಞಾನಿಕವಾಗಿದೆ ಎಂಬುದು ಸಾರ್ವಜನಿಕರ ಆರೋಪ. ಏಕೆಂದರೆ ಹಾಸನ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಪ್ರವೇಶವಾಗುವ ಶಿರಂಗಾಲದ ಕೊಲ್ಲಿಯ ಸೇತುವೆ ಬಳಿ ಇರುವ ಮಂಟಿಗಮ್ಮ ದೇವಾಲಯ ರಸ್ತೆಯ ಮೂಲಕ ಶಿರಂಗಾಲದ ಊರೊಳಗಾಗಿ ಸಾಗಿ ಮಣಜೂರು ಮೂಲಕ ಕುಶಾಲನಗರಕ್ಕೆ ಧಾವಿಸಬಹುದಾಗಿದೆ. ಆದರೆ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ದಂದಿಗಳು ಕೇವಲ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹಾಗೆಯೇ, ಹೆಬ್ಬಾಲೆ ಗ್ರಾಮದಿಂದ ನೆರೆಯ ಮೈಸೂರು ಜಿಲ್ಲಗೆ ಸಂಪರ್ಕ ಕಲ್ಪಿಸುವ ಸೂಳೆ ಕೋಟೆ ಮಾರ್ಗದ ಕಾವೇರಿ ನದಿ ಬಳಿ ಇರುವ ತಪಾಸಣಾ ಕೇಂದ್ರದಲ್ಲಿ ಯಾವುದೇ ಸಿಬ್ಬಂದಿಗಳು ಇಲ್ಲದ ಕಾರಣ ಕಳ್ಳ ಖದೀಮರು, ಗೋವುಗಳನ್ನು ಸಾಗಿಸುವವರು ಇದೇ ರಸ್ತೆಯ ಮೂಲಕ ಮೈಸೂರು ಹಾಗೂ ಹಾಸನ ಜಿಲ್ಲೆಗಳತ್ತ ತೆರಳುವ ರಾಜ ಮಾರ್ಗದಂತಾಗಿದೆ.

ಅಷ್ಟೇ ಅಲ್ಲ, ಚುನಾವಣೆಯಲ್ಲಿ ಹಣ - ಹೆಂಡ ಅಥವಾ ವಸ್ತುಗಳನ್ನು ಹಂಚಬಲ್ಲ ಅಭ್ಯರ್ಥಿಗಳಿಗೆ ಇದು ರಾಜ ಮಾರ್ಗದಂತಿದ್ದರೂ ಕೂಡ ಚುನಾವಣಾಧಿಕಾರಿಗಳು ಇತ್ತ ಇಲ್ಲಿಯ ತನಕ ಗಮನ ಹರಿಸಿದಂತಿಲ್ಲ.

ಕೊಡಗು ಜಿಲ್ಲೆಯಿಂದ ಮೈಸೂರು ಜಿಲ್ಲೆಯತ್ತ ಮರಗಳ ನಾಟಾಗಳು ಸಾಗಾಟವಾಗಬಾರದು ಎಂದು ಅರಣ್ಯ ಇಲಾಖೆ ಓರ್ವ ಸಿಬ್ಬಂದಿಯನ್ನು ನಿಯೋಜಿಸಿದೆಯಾದರೂ ಅಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಅಂದರೆ ತಪಾಸಣಾ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರಂತೂ ಮೊದಲೇ ಇಲ್ಲ. ತಂಗುವ ಸುಸಜ್ಜಿತ ವ್ಯವಸ್ಥೆಯೂ ಇಲ್ಲ.

ಅಕ್ಕ ಪಕ್ಕ ಯಾವುದೇ ಜನವಸತಿ ಪ್ರದೇಶವೂ ಇಲ್ಲ. ಹಾಗಾಗಿ ಇಲ್ಲಿ ಏನು ಬೇಕಾದರೂ ಯಾವುದೇ ಅಕ್ರಮಗಳು ನಡೆದರೂ ಕೂಡ ಅಚ್ಚರಿಯಲ್ಲ. ಈ ಬಗ್ಗೆ ಚುನಾವಣಾಧಿಕಾರಿಗಳು ಗಮನ ಹರಿಸುವಂತೆ ನಾಗರಿಕರು ಕೋರಿದ್ದಾರೆ. - ಕೆ.ಎಸ್. ಮೂರ್ತಿ