ಸೋಮವಾರಪೇಟೆ, ಏ. ೧೪: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಐಗೂರು, ಯಡವಾರೆ, ಸಜ್ಜಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಜನ ಸಾಮಾನ್ಯರು ಜೀವ ಭಯದೊಂದಿಗೆ ಬದುಕು ಸಾಗಿಸುವಂತಾಗಿದೆ ಎಂದು ಆರೋಪಿಸಿದ ಸಾರ್ವಜನಿಕರು, ತಕ್ಷಣ ಕಾಡಾನೆಗಳ ಹಾವಳಿ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದು ಅರಣ್ಯಾಧಿಕಾರಿ ಗಳನ್ನು ಒತ್ತಾಯಿಸಿದರು.

ಮೊನ್ನೆಯಷ್ಟೇ ಬೆಳ್ಳಂಬೆಳಗ್ಗೆ ಯಡವಾರೆ-ಕಾಜೂರು ರಸ್ತೆಯಲ್ಲಿ ಕಾಡಾನೆಯೊಂದು ಬೈಕ್ ಸವಾರರ ಮೇಲೆ ಧಾಳಿ ನಡೆಸಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ರೈಲ್ವೇ ಬ್ಯಾರಿಕೇಡ್ ಮತ್ತು ಆನೆ ಕಂದಕ ಕಾಮಗಾರಿ ಅವೈಜ್ಞಾನಿಕವಾಗಿರುವು ದರಿಂದ ಸಮಸ್ಯೆ ಜೀವಂತವಾಗಿದೆ ಎಂದು ಸಾರ್ವಜನಿಕರು ದೂರಿದರು.

ಯಡವಾರೆ ಗ್ರಾಮದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಎಸಿಎಫ್ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳ ಎದುರು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಪ್ರತಿ ಬಾರಿಯೂ ಕಾಡಾನೆಗಳ ದಾಳಿಯಾದಾಗ ಅರಣ್ಯ ಇಲಾಖೆ ಯವರು ಕಾಡಾನೆಗಳ ನಿಯಂತ್ರಣದ ಭರವಸೆ ನೀಡುತ್ತಿದ್ದಾರೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ೪ ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಅಸಮರ್ಪಕ ವಾಗಿದೆ. ಇದೀಗ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟಕ್ಕೆ ಅನುಕೂಲ ಕಲ್ಪಿಸಲು ಮಾತ್ರ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು.

ಇದರಿಂದಾಗಿ ಕಾಫಿ ತೋಟ ದೊಳಗೆ ತೆರಳುತ್ತಿದ್ದ ಕಾಡಾನೆಗಳು ರಸ್ತೆಯ ಮೇಲೆಯೇ ನಡೆಯುತ್ತಿವೆ. ತೋಟದೊಳಗಿರುವ ಆನೆ ಕಾರಿಡಾರ್ ಮುಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಇದರೊಂದಿಗೆ ಈ ಭಾಗದಲ್ಲಿ ಬೇಟೆಯೂ ಅಧಿಕವಾಗುತ್ತಿದೆ. ಇದರಿಂದಾಗಿ ವನ್ಯಪ್ರಾಣಿಗಳು ಜನವಸತಿ ಪ್ರದೇಶದತ್ತ ಬರುತ್ತಿವೆ. ಈ ಬಗ್ಗೆಯೂ ಅರಣ್ಯ ಇಲಾಖೆ ಗಮನ ಹರಿಸಬೇಕೆಂಬ ಆಭಿಪ್ರಾಯ ಕೇಳಿಬಂತು.

ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿದ ಎಸಿಎಫ್ ಗೋಪಾಲ್ ಅವರು, ನಕಾಶೆಯಲ್ಲಿರುವ ಆನೆ ಕಾರಿಡಾರ್ ಮುಚ್ಚಲ್ಪಟ್ಟಿದ್ದರೆ ಅದನ್ನು ತೆರವುಗೊಳಿಸ ಲಾಗುವುದು. ಉಳಿಕೆಯಾಗಿರುವ ರೈಲ್ವೇ ಬ್ಯಾರಿಕೇಡ್ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸ ಲಾಗುವುದು. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪುಂಡಾನೆಗೆ ರೇಡಿಯೋ ಕಾಲರ್ ಅಳವಡಿಸ ಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಆರ್‌ಎಫ್‌ಓ ಚೇತನ್, ಪ್ರಮುಖರಾದ ಮಚ್ಚಂಡ ಅಶೋಕ್, ರಾಯ್ ಪಾಲಾಕ್ಷ, ಗರಗಂದೂರು ಲಕ್ಷö್ಮಣ್, ಅಡಿಕೇರಿ ಸುಬ್ಬಯ್ಯ, ಎಸ್.ಎನ್. ಯೋಗೇಶ್, ಚಿನ್ನಳ್ಳಿ ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.