ಸಿದ್ದಾಪುರ, ಏ. ೧೪: ಮಾಲ್ದಾರೆ ಗ್ರಾಮದ ಅಸ್ಥಾನದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಅಸ್ಥಾನ ಹಾಡಿಯ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಹಿನ್ನೆಲೆ ಅಮ್ಮತ್ತಿ ಹೋಬಳಿ ಕಂದಾಯ ಪರೀಕ್ಷಕ ಅನಿಲ್ ಕುಮಾರ್ ಅಸ್ಥಾನಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಿದರು.
ಚೆಸ್ಕಾಂ ನಿಗಮದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಚರ್ಚಿಸಿದರು. ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿ ಕೊಡುವುದಾಗಿ ಭರವಸೆಯನ್ನು ನೀಡಿದ ಬಳಿಕ ಅಸ್ಥಾನ ಹಾಡಿಯ ನಿವಾಸಿಗಳು ಚುನಾವಣಾ ಬಹಿಷ್ಕಾರ ನಿರ್ಧಾರ ಕೈಬಿಟ್ಟರು. ಈ ಸಂದರ್ಭದಲ್ಲಿ ಚೆಸ್ಕಾಂ ನಿಗಮದ ಅಧಿಕಾರಿಗಳು ಗ್ರಾ.ಪಂ ಪಿಡಿಓ ಸತೀಶ್, ಗ್ರಾಮ ಲೆಕ್ಕಿಗ ಪ್ರವೀಣ್ ಹಾಗೂ ಸ್ಥಳೀಯರು ಹಾಜರಿದ್ದರು.