ಕಾಂಗ್ರೆಸ್ ಸೇರ್ಪಡೆಗೊಂಡ ಲಕ್ಷö್ಮಣ್ ಸವದಿ

ಬೆಂಗಳೂರು, ಏ. ೧೪: ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಕಾರಣ ತೀವ್ರ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷö್ಮಣ್ ಸವದಿ ಅವರು ಇಂದು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಜೊತೆಗೆ ಕಾಂಗ್ರೆಸ್ ಸೇರ್ಪಡೆಗೊಂಡರು. ಬೆಂಗಳೂರಿನಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ತೆರಳಿದ ಲಕ್ಷö್ಮಣ್ ಸವದಿ ಅವರು ರಾಜಿನಾಮೆ ಪತ್ರವನ್ನ ನೀಡಿದ್ದಾರೆ. ಈ ವೇಳೆ ಯಾವುದಾದರೂ ರಾಜಕೀಯ ಒತ್ತಡಕ್ಕೆ ಸಿಲುಕಿ ರಾಜಿನಾಮೆ ನೀಡುತ್ತಿದ್ದೀರಾ ಎಂದು ಸಭಾಪತಿಗಳು ಪ್ರಶ್ನಿಸಿದ್ದು ಇದಕ್ಕೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಸವದಿ ಹೇಳಿದರು. ಇದಕ್ಕೂ ಮುನ್ನ ಲಕ್ಷ್ಮಣ್ ಸವದಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿವಿಧ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರು. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷ ಬಿಡುವ ಸುಳಿವು ನೀಡಿದ್ದ ಸವದಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಲಕ್ಷ್ಮಣ್ ಸವದಿ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಸದ್ಯ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಹಾಗೂ ಒಂದು ವೇಳೆ ಪಕ್ಷ ಗೆದ್ದು ಸರ್ಕಾರ ರಚಿಸಿದರೆ ಬೆಳಗಾವಿಯಲ್ಲಿ ನಿಂತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಕೇಳಿದ್ದಾರೆ. ಇದಕ್ಕೆ ಕೈ ನಾಯಕರು ಆಗಲಿ ಎಂದಿದ್ದಾರೆ ಎಂದು ಸವದಿ ಹೇಳಿದರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಸವದಿ ಹೇಳಿದ್ದಾರೆ.

ಜೆಡಿಎಸ್ ಸೇರಿದ ಪ್ರಭಾವಿ ರಾಜಕಾರಣಿಗಳು

ಬೆಂಗಳೂರು, ಏ. ೧೪: ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ರಘು ಆಚಾರ್, ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಶಹಾಪುರ ಕ್ಷೇತ್ರದ ಮಾಜಿ ಶಾಸಕ ಗುರುಲಿಂಗಪ್ಪಗೌಡ (ಗುರು ಪಾಟೀಲ ಶಿರವಾಳ) ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್, ಬಿಜೆಪಿ ತೊರೆದು ಶುಕ್ರವಾರ ಜೆಡಿಎಸ್ ಸೇರಿದರು. ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಎಲ್ಲರಿಗೂ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಸ್ವಾಗತಿಸಿದರು. ರಘು ಆಚಾರ್ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ದೊಡ್ಡಪ್ಪಗೌಡ ಪಾಟೀಲ ಜೇವರ್ಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗುರುಲಿಂಗಪ್ಪಗೌಡ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದರು. ಎಲ್ಲರೂ ಜೆಡಿಎಸ್ ನಿಂದ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಸನ ಟಿಕೆಟ್ ಸ್ವರೂಪ್ ಪಾಲು

ಹಾಸನ ಟಿಕೆಟ್ ಸ್ವರೂಪ್ ಪಾಲು

ಬೆಂಗಳೂರು, ಏ. ೧೪: ಮೇ ೧೦ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ. ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ೪೯ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದಲ್ಲಿ ತಾವು ಬಯಸಿದಂತೆ ಎಚ್.ಪಿ. ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದ್ದಾರೆ. ಅಲ್ಲದೆ ಅಧಿಕೃತವಾಗಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಿಸುವ ಮುನ್ನವೇ ಕುಮಾರಸ್ವಾಮಿ ಅವರು ಸ್ವರೂಪ್ ಗೆ ಬಿ ಫಾರಂ ನೀಡಿದ್ದಾರೆ. ಈ ವೇಳೆ ಮಾತನಾಡಿದ ಎಚ್.ಡಿ. ರೇವಣ್ಣ ಅವರು, ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ದೇವೇಗೌಡರೇ ತೀರ್ಮಾನ ಮಾಡಿದ್ದಾರೆ. ಹಾಸನ ಕ್ಷೇತ್ರದಲ್ಲಿ ಭವಾನಿ ಅವರನ್ನು ಕಣಕ್ಕಿಳಿಸಬೇಕೆಂದು ಹೇಳುತ್ತಿದ್ದೆ. ಕಳೆದ ೨ ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ ೫೦,೦೦೦ ಮತಗಳ ಅಂತರದಿAದ ಗೆಲ್ಲುವೆ ಅಂತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.

ಚುನಾವಣಾ ರಾಜಕಾರಣದಿಂದ ನಿವೃತ್ತಿಗೆ ಸೂಚನೆ

ಬಳ್ಳಾರಿ, ಏ. ೧೪: ಹಿರಿಯ ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಅವರಿಗೆ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ತಮ್ಮ ಮಗ ಕಾಂತೇಶ್ ಅವರಿಗೆ ಪಕ್ಷದ ಟಿಕೆಟ್ ದೊರಕಿಸುವಂತೆ ದೇವರಲ್ಲಿ ಪ್ರಾರ್ಥಿಸಲು ಬಳ್ಳಾರಿ ನಗರದಲ್ಲಿರುವ ಮನೆ ದೇವರು ಚೌಡೇಶ್ವರಿ ದೇವಾಲಯಕ್ಕೆ ಕುಟುಂಬ ಸಮೇತ ಬಂದಿದ್ದ ಈಶ್ವರಪ್ಪ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಮಗೆ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಬಿ.ಎಸ್. ಸಂತೋಷ್ ಅವರೂ ಮಾತನಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ನಾನು ಪಕ್ಷ ರಾಜಕಾರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಬಿಜೆಪಿ ನನಗೆ ಎಲ್ಲ ಸ್ಥಾನಮಾನ, ಗೌರವ ಕೊಟ್ಟಿದೆ. ಪಕ್ಷ ವಹಿಸಿದ್ದ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ. ಈ ಚುನಾವಣೆಯಲ್ಲೂ ಪಕ್ಷ ಕೊಟ್ಟ ಕೆಲಸ ಮಾಡುತ್ತೇನೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಮುಳುಗಿ ನಾಲ್ವರ ಸಾವು

ಬೆಳಗಾವಿ, ಏ. ೬: ಘಟಪ್ರಭಾ ನದಿಗೆ ಈಜಲು ಹೋಗಿದ್ದ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗೋಕಾಕ್ ತಾಲೂಕಿನ ಧೂಪದಾಳ ಪಟ್ಟಣದ ಪ್ರವಾಸಿ ಮಂದಿರದ ಬಳಿ ಈ ಘಟನೆ ನಡೆದಿದೆ. ಮೃತರನ್ನು ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದ ೧೮ ವರ್ಷದ ಸಂತೋಷ ಬಾಬು ಇಟಗಿ ಮತ್ತು ಅಜಯ್ ಬಾಬು ಜೋರೆ, ೨೨ ವರ್ಷದ ಕೃಷ್ಣಾ ಬಾಬು ಜೋರೆ ಹಾಗೂ ೧೯ ವರ್ಷದ ಆನಂದ ಕೋಕರೆ ಎಂದು ಗುರುತಿಸಲಾಗಿದೆ. ಇಂದು ಕೆಲಸಕ್ಕೆ ರಜೆ ಇದ್ದ ಕಾರಣ ಮಧ್ಯಾಹ್ನ ಈಜಾಡಲೆಂದು ಆರು ಯುವಕರ ತಂಡ ನದಿಗೆ ಹೋಗಿತ್ತು. ಈ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಮೃತರು ಘಟಪ್ರಭಾದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಎನ್ನಲಾಗಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊರೊನಾ ಪ್ರಕರಣಗಳು ಹೆಚ್ಚಳ

ನವದೆಹಲಿ, ಏ. ೧೪: ಭಾರತದಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೧,೧೦೯ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ ೪,೪೭,೯೭,೨೬೯ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್‌ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ ೫,೩೧,೦೬೪ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪೯,೬೨೨ಕ್ಕೆ ತಲುಪಿದೆ. ಈ ನಡುವೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ ೪,೪೨,೧೬,೫೮೩ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ ೨,೨೧,೭೨೫ ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ೯೨,೩೭.೧೯,೨೦೭ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.