ಕಣಿವೆ, ಏ. ೧೨: ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಬಿತ್ತನೆಗೆ ಪ್ರತಿ ವರ್ಷದ ಫೆಬ್ರವರಿ ಅಥವಾ ಮಾರ್ಚ್ ಸಕಾಲವಾಗಿರುತ್ತದೆ.

ಆದರೆ, ಈ ಬಾರಿ ಸಕಾಲದಲ್ಲಿ ಮಳೆ ಬೀಳದ ಕಾರಣ ಶುಂಠಿ ಬಿತ್ತನೆಗೆ ಮಳೆಗಾಗಿ ಕಾದು ಕುಳಿತ ಕೃಷಿಕರು, ಸುಡುವ ಭೂಮಿಗೆ ನೀರನ್ನು ಸಿಂಪಡಿಸಿ ಮಳೆಗಾಗಿ ವರುಣ ದೇವರಲ್ಲಿ ಪ್ರಾರ್ಥಿಸಿ ಮೊಳಕೆಯೊಡೆದು ಮೇಲೆ ಬರುತ್ತಿರುವ ಶುಂಠಿಯ ಬಿತ್ತನೆಗೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಶುಂಠಿ ಬೆಳೆಗೆ ನೀರಾವರಿ ಸೌಲಭ್ಯ ಅತಿ ಮುಖ್ಯ. ಒಮ್ಮೆ ಶುಂಠಿ ಬಿತ್ತಿದ ಭೂಮಿಗೆ ನೀರನ್ನು ಹದವಾಗಿ ಹರಿಸಿ ಮಣ್ಣನ್ನು ಶೀತವಾಗಿ ಇಡಬೇಕು. ಅದೇ ಹದಮಯವಾದ ಶೀತಾಂಶ ಆ ಬಿತ್ತನೆಯ ಶುಂಠಿ ಫಸಲಾಗಿ ಕಟಾವು ಮಾಡುವ ಆರರಿಂದ ಎಂಟು ತಿಂಗಳವರೆಗೂ ಹಾಗೆಯೇ ನಿರ್ವಹಣೆ ಮಾಡಬೇಕು. ಆದರೆ ಈ ಬಾರಿ ಮಳೆ ಸುರಿಸಬೇಕಾದ ಮರೆಯಾದ ಮೋಡದಲ್ಲಿ ಸೂರ್ಯನ ಪ್ರತಾಪ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿಯೇ ಇದೆ.

ಆದ್ದರಿಂದ ಸ್ವಾಭಾವಿಕ ಹರಿವ ನದಿ ತೊರೆಗಳ ನೀರೇ ಬತ್ತುವ ಸ್ಥಿತಿಗೆ ತಲುಪಿರುವಾಗ ಇನ್ನು ಕೊಳವೆ ಬಾವಿಗಳ ಸ್ಥಿತಿ ಇನ್ನೇನೋ ಎಂದು ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಹ ದುಸ್ಥಿತಿಯು ಎದುರಾಗಿದೆ.

ಬೇರೆ ಬೆಳೆಯಂತಲ್ಲ ಶುಂಠಿ

ಶುAಠಿ ಕೃಷಿ ಬೇರೆ ಯಾವುದೇ ಬೆಳೆಗಳಂತಲ್ಲ. ಬಿತ್ತನೆಯಿಂದ ಕಟಾವಿನತನಕ ಸರಾಸರಿ ಮೂರುವರೆ ಲಕ್ಷ ರೂಪಾಯಿಗಳಿಂದ ನಾಲ್ಕು ಲಕ್ಷ ರೂಪಾಯಿಗಳು ಖರ್ಚು ತಗಲುವ ಈ ಶುಂಠಿ ಕೃಷಿ, ಒಂದು ರೀತಿ ಅದೃಷ್ಟದ ಬೆಳೆ ಎಂದೇ ಜನಜನಿತವಾದುದು.

ಶುಂಠಿ ಬೆಳೆ ಕೈಗೊಳ್ಳುವ ಕೃಷಿಕನ ಹಣೆಬರಹ ಚೆನ್ನಾಗಿದ್ದು ಸಕಾಲಕ್ಕೆ ಮಳೆ ಸುರಿದು, ರೋಗ ರುಜಿನಗಳು ಬಾಧಿಸದೇ ಉತ್ತಮವಾದ ಬೆಳೆ ಬಂದರೆ ಕೃಷಿಕನ ಮುಖದಲ್ಲಿ ಅತೀವವಾದ ಖುಷಿ ಕಾಣಬಹುದಾಗಿದೆ.

ಆದರೆ ನಸೀಬು ಕೆಟ್ಟು ಬೇರೆ ಬೇರೆ ಕಾರಣಗಳಿಂದ ಬೆಳೆ ಕೈ ಕೊಟ್ಟರೆ ಆ ಕೃಷಿಕನ ಬದುಕು ಕೃಷವಾಗುತ್ತದೆ.

ಅಂತರ್ಜಲ ಕುಸಿತ

ಎಲ್ಲೆಂದರಲ್ಲಿ ಶುಂಠಿ ಬೆಳೆಗೋಸ್ಕರ ಭೂಮಿಯನ್ನು ಅಗೆದು ಬಗೆದು ಯಂತ್ರಗಳಿAದ ಸಾವಿರಾರು ಅಡಿಗಳಷ್ಟು ಒಳ ಕೊರೆದು ನೀರು ತೆಗೆದು ವರ್ಷವಿಡೀ ಶುಂಠಿ ಹೊಲಗಳಿಗೆ ನೀರು ಹರಿಸಲಾಗುತ್ತದೆ.

ಆದರೆ ಈ ಬಾರಿ ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಂದೇ ಒಂದು ಮಳೆ ಸುರಿಯದ ಕಾರಣ ಭೂಮಿಯ ತಾಪಮಾನ ಹೆಚ್ಚಾಗಿದೆ. ಅಂದರೆ ೩೪ ರಿಂದ ೩೫ ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗುತ್ತಿದ್ದು ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕೊಳವೆ ಬಾವಿಗಳು ಒಂದು ವೇಳೆ ಸಾಮೂಹಿಕವಾಗಿ ಕೈಕೊಟ್ಟರೆ ಬಹಳಷ್ಟು ಮಂದಿ ಶುಂಠಿ ಕೃಷಿಕರು ಬೀದಿಗೆ ಬೀಳುತ್ತಾರೆ.

ಹಾಗಾಗಿ ಶುಂಠಿ ಬಿತ್ತನೆ ಮಾಡಿದ ಆರಂಭದ ಎರಡು ತಿಂಗಳವರೆಗೂ ಶುಂಠಿ ಬಿತ್ತನೆ ಮಾಡಿದ ಹೊಲ ಗದ್ದೆಗಳಲ್ಲಿ ಶೀತಾಂಶವಿದ್ದರೆ ಶುಂಠಿ ಮೊಳಕೆಯೊಡೆದು ಮೇಲೆ ಗರಿ ಮೂಡಿ ಬರುತ್ತದೆ. ಒಂದು ವೇಳೆ ನೀರಿನಾಂಶದ ಕೊರತೆಯಾದರೆ ಶುಂಠಿಯ ಬೆಳೆಯ ಮೇಲೆ ಮಾರಕ ದುಷ್ಪರಿಣಾಮ ಬೀರುತ್ತದೆ.