ಪಾಲಿಬೆಟ್ಟ, ಏ. ೧೨: ಚೆಶೈರ್ ಹೋಮ್ ವಿಶೇಷ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚಂಗಪ್ಪ ಅವರಿಗೆ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯಂದು ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಪಾಲಿಬೆಟ್ಟದ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅನುಗ್ರಹ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಯಾವುದೇ ಕ್ಷೇತ್ರದಲ್ಲೂ ಸಾಧಿಸುವ ಛಲ ಇದ್ದರೆ ಸಾಧನೆ ಮಾಡಲು ಸಾಧ್ಯವಾಗಲಿದೆ. ಸೇವೆ ಎಂಬುದು ಕೆಲ ಸಮಯಕ್ಕೆ ಮಾತ್ರ ಸೀಮಿತವಾಗದೆ ಅದು ಪ್ರತಿಯೊಬ್ಬರಲ್ಲೂ ಒಂದು ಜೀವನಶೈಲಿಯಾಗಲಿ ಎಂದು ಕರೆ ನೀಡಿದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಡೋಮಿ - ಪಿ ರೋಜಾರಿಯೊ, ಮಾತನಾಡಿ ಗೀತಾ ಚಂಗಪ್ಪನವರು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು. ಪಾಲಿಬೆಟ್ಟ ಲಯನ್ಸ್ ಸಂಸ್ಥೆಗಳ ವಲಯ ಅಧ್ಯಕ್ಷೆ ನೀತಿ ಪೂಣಚ್ಚ, ಕಾರ್ಯದರ್ಶಿ ಡಾ.ದೇವಗಿರಿ, ಖಜಾಂಚಿ ಕೆ. ರಾಣಾ ಮುತ್ತಪ್ಪ, ಪ್ರಮುಖರಾದ ಕವಿತಾ ಅಚ್ಚಯ್ಯ, ಡಾ. ಎ.ಸಿ. ಗಣಪತಿ ಸೇರಿದಂತೆ ಮತ್ತಿತರರು ಹಾಜರಿದ್ದರು.