ಎಲ್ಲ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುತ್ತೇವೆ: ರಾಹುಲ್ ಗಾಂಧಿ

ನವದೆಹಲಿ, ಏ. ೧೨: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಎಲ್ಲಾ ಪ್ರತಿಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವುದಾಗಿ ವಾಗ್ದಾನ ಮಾಡಿದ್ದಾರೆ. ೨೦೨೪ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನ ಮಾತುಕತೆಯ ನಡುವೆಯೇ ಮಹಾಘಟಬಂಧನ ನಾಯಕರಾದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರು ಇಂದು ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ಇದು 'ಐತಿಹಾಸಿಕ ಸಭೆ' ಎಂದು ಬಣ್ಣಿಸಿದರು. ಮುಂಬರುವ ಚುನಾವಣೆಗಾಗಿ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. ನಂತರ ಮಾತನಾಡಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳನ್ನು ಒಂದುಗೂಡಿಸಲು ಐತಿಹಾಸಿಕ ಹೆಜ್ಜೆ ತೆಗೆದುಕೊಳ್ಳಲಾಗಿದೆ. ಇದು ಒಂದು ಪ್ರಕ್ರಿಯೆ, ದೇಶಕ್ಕಾಗಿ ವಿರೋಧ ಪಕ್ಷದ ದೃಷ್ಟಿಕೋನವನ್ನು ಇದು ರೂಪಿಸುತ್ತದೆ ಎಂದು ಹೇಳಿದರು. ಈ ಸೈದ್ಧಾಂತಿಕ ಹೋರಾಟದಲ್ಲಿ ಎಲ್ಲ ಪ್ರತಿ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುತ್ತೇವೆ. ಕೇಂದ್ರೀಯ ಸಂಸ್ಥೆಗಳ ಮೇಲಿನ ದಾಳಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು. ಇನ್ನು ಸಾಧ್ಯವಾದಷ್ಟು ಎಲ್ಲಾ ಪ್ರತಿ ಪಕ್ಷಗಳನ್ನು ಒಗ್ಗೂಡಿಸುವುದು ಮತ್ತು ಜತೆಗೆ ಕೆಲಸ ಮಾಡುವ ಪ್ರಯತ್ನವಾಗಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡಿದ ಜಗದೀಶ್ ಶೆಟ್ಟರ್

ನವದೆಹಲಿ, ಏ. ೧೨: ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಕಣಕ್ಕಿಳಿಸದಿರುವ ಪಕ್ಷದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಟಿಕೆಟ್ ಕೈತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರು ಇಂದು ದಿಢೀರ್ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ನಡ್ಡಾ ಭೇಟಿ ಬಳಿಕ ಮಾತನಾಡಿದ ಶೆಟ್ಟರ್, ಜೆ.ಪಿ. ನಡ್ಡಾ ಅವರೊಂದಿಗೆ ನನ್ನ ಭಾವನೆ ಹಂಚಿಕೊAಡಿದ್ದೇನೆ. ಅವರು ಎಲ್ಲವನ್ನೂ ಆಲಿಸಿದ್ದಾರೆ. ಕಳೆದ ಚುನವಾಣೆಯಲ್ಲಿ ಸ್ಪರ್ಧಿಸಿದ್ದು, ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ನನ್ನ ಆಶಯ ಎಂದಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನ ಹಾಲಿ ಶಾಸಕರಾಗಿರುವ ಶೆಟ್ಟರ್ ಅವರಿಗೆ ನಿನ್ನೆ ಕರೆ ಮಾಡಿದ್ದ ಬಿಜೆಪಿ ವರಿಷ್ಠರು, ಚುನಾವಣೆಗೆ ನೀವು ಸ್ಪರ್ಧಿಸಬೇಡಿ. ಬೇರೆಯವರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು. ಇದಕ್ಕೆ ಒಪ್ಪದ ಶೆಟ್ಟರ್ ಅವರು, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಮಂಗಳವಾರ ಬಿಜೆಪಿ ೧೮೯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶೆಟ್ಟರ್ ಅವರಿಗೆ ಟಿಕೆಟ್ ಘೋಷಿಸಿಲ್ಲ.

ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ನ್ಯಾಯಾಂಗಕ್ಕೆ ‘ಅಗ್ನಿ ಪರೀಕ್ಷೆ' ಎಂದ ಕಾಂಗ್ರೆಸ್

ನವದೆಹಲಿ, ಏ. ೧೨: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿರುವುದು ಮತ್ತು ಲೋಕಸಭೆಯಿಂದ ಅನರ್ಹಗೊಳಿಸಲು ಬಳಸಿದ ಕಾನೂನು ಪ್ರಕ್ರಿಯೆಯು ತುಂಬಾ ದೋಷಪೂರಿತವಾಗಿದೆ ಮತ್ತು ಇದು ಭಾರತೀಯ ನ್ಯಾಯಾಂಗಕ್ಕೆ ಅಗ್ನಿ ಪರೀಕ್ಷೆಯಾಗಿದ್ದು, ಅದನ್ನು ಸರಿಪಡಿಸಲಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಅವರು ಹೇಳಿದ್ದಾರೆ. ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ವಕ್ತಾರ, ರಾಹುಲ್ ಗಾಂಧಿಯ ಶಿಕ್ಷೆ ಮತ್ತು ಅನರ್ಹತೆಯ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅದು ಕಾನೂನು ಮತ್ತು ಸಂವಿಧಾನದಲ್ಲಿ ಅತ್ಯಂತ ದೋಷಪೂರಿತವಾಗಿದೆ ಎಂದು ಹೇಳಿದ್ದಾರೆ. ಎಲ್ಲರಿಗೂ ಇದೇ ಮಾನದಂಡವನ್ನು ಅನ್ವಯಿಸಿದರೆ, ಬಹುಶಃ ಭಾರತದ ಸಂಸತ್ತು ಟೊಳ್ಳಾಗುತ್ತಿತ್ತು. ರಾಜಕೀಯ ಪಕ್ಷಗಳ ಹೆಚ್ಚಿನ ಪ್ರಮುಖ ನಾಯಕರು ದಶಕಗಳಿಂದ ಸಂಸತ್ತಿನಿAದ ಹೊರಗುಳಿಯುತ್ತಿದ್ದರು. ಆದರೆ ಹಾಗಾಗಿಲ್ಲ ಎಂದಿದ್ದಾರೆ. ಇದು ಭಾರತೀಯ ನ್ಯಾಯಾಂಗಕ್ಕೂ ಅಗ್ನಿಪರೀಕ್ಷೆಯಾಗಲಿದೆ. ತಪ್ಪನ್ನು ಸರಿಪಡಿಸಲಾಗುವುದು, ಕಾನೂನಿನ ದೋಷಪೂರಿತ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಕಾನೂನು ಮತ್ತು ಸಂವಿಧಾನದ ಬಗ್ಗೆ ನನಗಿರುವ ತಿಳುವಳಿಕೆಯನ್ನು ನಾನು ಹೇಳುತ್ತಿದ್ದೇನೆ ಎಂದು ಶರ್ಮಾ ತಿಳಿಸಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಇದನ್ನು ಅನುಸರಿಸಿ ಮಾಜಿ ಕಾಂಗ್ರೆಸ್ ಅಧ್ಯಕ್ಷರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಅಲ್ಲದೆ ತುಘಲಕ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ಏಪ್ರಿಲ್ ೨೨ ರೊಳಗೆ ಖಾಲಿ ಮಾಡುವಂತೆ ಲೋಕಸಭೆ ಸೆಕ್ರೆಟರಿಯೇಟ್ ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.

ಬಿಜೆಪಿ ಟಿಕೆಟ್ ಸಿಗದಕ್ಕೆ ಅಸಮಾಧಾನ: ಶಂಕರ್ ರಾಜೀನಾಮೆ

ಬೆಂಗಳೂರು, ಏ. ೧೨: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ ೧೮೯ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮಗೆ ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಣೆಬೆನ್ನೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ಬದಲಿಗೆ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಆರ್. ಶಂಕರ್ ತಮ್ಮ ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಆರ್. ಶಂಕರ್ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು. ಆರ್. ಶಂಕರ್ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಅಧಿಕೃತವಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ: ನೆರವು ಕೋರಿ ಪ್ರಧಾನಿಗೆ ಪತ್ರ

ನವದೆಹಲಿ, ಏ. ೧೨: ರಷ್ಯಾ- ಉಕ್ರೇನ್ ಕದನದಲ್ಲಿ ಮಧ್ಯಪ್ರವೇಶ ಮಾಡುವಂತೆ ಹಾಗೂ ಯುದ್ಧದಿಂದ ತತ್ತರಿಸಿರುವ ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡುವಂತೆ ಕೋರಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸಿ÷್ಕ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಉಕ್ರೇನ್ ಉಪ ವಿದೇಶಾಂಗ ಸಚಿವೆ ಎಮಿನೆ ಜಪರೊವಾ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಖಾತೆ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಈ ಪತ್ರವನ್ನು ಹಸ್ತಾಂತರಿಸಿದ್ದಾರೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಈ ಇಬ್ಬರು ನಾಯಕಿಯರು ಅಭಿಪ್ರಾಯಗಳನ್ನು ಹಂಚಿಕೊAಡರು. ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡುವ ಭರವಸೆಯನ್ನು ಕೊಡಲಾಗಿದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದರೆ, ಈ ಭೇಟಿ ಫಲಪ್ರದವಾಗಿದೆ ಎಂದು ಜಪರೊವಾ ಹೇಳಿದ್ದಾರೆ.