ಕಣಿವೆ, ಏ. ೧೨: ಇದೀಗ ಎಲ್ಲೆಲ್ಲೂ ಮಳೆ ಸುರಿಯದ ಕಾರಣ ಅರಣ್ಯದೊಳಗೆ ಕಾಡಾನೆಗಳಿಗೆ ತಿನ್ನಲು ಆಹಾರವೂ ಇಲ್ಲ. ಕುಡಿಯುವ ನೀರಂತು ಮೊದಲೇ ಇಲ್ಲ. ಹಾಗಾಗಿ ದೊಡ್ಡ ಹೊಟ್ಟೆಯ ಕಾಡಾನೆಗಳು ಹಸಿವು ಹಾಗೂ ಬಾಯಾರಿಕೆ ನೀಗಿಸಿಕೊಳ್ಳಲು ರಾತ್ರಿಯಾಗುವುದನ್ನೇ ಕಾದು ಕಾದು ಸಾಕಾಗಿ ಕಾಡಂಚಿನ ಗ್ರಾಮಗಳಿಗೆ ತೆರಳಿ ಕೃಷಿಕನ ಹೊಲ - ಗದ್ದೆ ಹಾಗೂ ತೋಟಗಳನ್ನು ನಾಶ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಿವೆ. ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಕೃಷಿ ಫಸಲು ಕಾಡಾನೆಗಳ ಪಾಲಾಗುವುದನ್ನು ತಪ್ಪಿಸಲು ಕಾಡಂಚಿನ ಕೃಷಿಕರು ರಾತ್ರಿ ಹಗಲೆನ್ನದೆ ಹರಸಾಹಸ ಪಡುವುದು ನಿತ್ಯನೂತನವಾಗಿದೆ.

ರಾತ್ರಿಯಿಡೀ ಜಾಗರಣೆ ಇದ್ದು ಕಾಡಾನೆಗಳನ್ನು ಕಾಯುವ ಕಾಯಕ ಕಾಡಂಚಿನ ಗ್ರಾಮಗಳ ಕೃಷಿಕರ ಹಣೆಬರಹವಾಗಿದೆ. ಅಂದರೆ ಹಣೆಬರಹ ಗಟ್ಟಿ ಇದ್ದರೆ ಬೆಳೆದ ಬೆಳೆ ಹಾಗೂ ಬೆಳೆಗಾರನ ಜೀವ ಎರಡೂ ಉಳಿಯುತ್ತದೆ. ಇಲ್ಲದಿದ್ದರೆ ಎರಡೂ ಹೋಗುತ್ತದೆ. ಈಗಾಗಲೇ ಕಾಡಂಚಿನ ಬಹಳ ಕಡೆ ಇಂತಹ ಪರಿಸ್ಥಿತಿ ಹಗಲಿರುಳೆನ್ನದೇ ಘಟಿಸುತ್ತಲೇ ಇದೆ. ಹಾಗಾಗಿ ಇಂತಹ ಪ್ರಕರಣಗಳು ಅರಣ್ಯ ಇಲಾಖೆಗಳ ಕಡತಗಳಲ್ಲಿ ದಾಖಲಾಗುತ್ತಲೇ ಇವೆ.

ಕಳೆದ ಕೆಲವು ದಿನಗಳ ಹಿಂದೆ ಹಾರಂಗಿ ಸಮೀಪದ ಅತ್ತೂರು ಗ್ರಾಮದ ಕೃಷಿಕ ಬೆಳ್ಳಿಪ್ಪಾಡಿ ಲೋಕೇಶ್ (೪೨) ಎಂಬವರು ತಾವು ಬೆಳೆದ ಫಸಲಿಗೆ ಲಗ್ಗೆಯಿಟ್ಟ ಎರಡು ಕಾಡಾನೆಗಳನ್ನು ಬೆನ್ನಟ್ಟಲು ಹೋದ ಸಂದರ್ಭ ಕಾಡಾನೆಯ ಧಾಳಿಗೆ ಸಿಲುಕಿ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ.

ಘಟನೆ ಹೇಗಾಯಿತು

ಅಂದು ರಾತ್ರಿ ಸಮಯ ೮-೨೫ ರಲ್ಲಿ ಕೃಷಿಕ ಲೋಕೇಶ್ ಊಟಕ್ಕೆ ಕುಳಿತಿದ್ದಾಗ, ನೆರೆಮನೆ ನಿವಾಸಿ ಅಶೋಕ್ ಎಂಬವರಿAದ ಒಂದು ಫೋನ್ ಕರೆ ಬಂತು. ಲೋಕೇಶ ಎರಡು ಕಾಡಾನೆಗಳು ನಿಮ್ಮ ತೋಟದ ಕಡೆ ಬರ್ತಾ ಇವೆ. ನೋಡು ಹಿಮ್ಮೆಟ್ಟಿಸು ಎಂದಿದ್ದಾರೆ. ಊಟ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿ ತಕ್ಷಣವೇ ಹಣೆ ಮೇಲೆ ಟಾರ್ಚ್ ಧರಿಸಿದ ಲೋಕೇಶ್ ಸೀದಾ ತಮ್ಮ ತೋಟದೊಳಕ್ಕೆ ತೆರಳಿದ್ದಾರೆ.

ಈ ಸಂದರ್ಭ ಇವರನ್ನು ಕಂಡ ಒಂದು ಕಾಡಾನೆ ಒಂದಷ್ಟು ದೂರ ಹಿಂದೆ ಸರಿಯಿತು. ಆದರೆ ಅದರ ಜೊತೆ ಇದ್ದ ಮತ್ತೊಂದು ಕಾಡಾನೆ ಇವರ ಹಣೆಯಲ್ಲಿನ ಟಾರ್ಚ್ ಬೆಳಕನ್ನು ಗುರಿ ಮಾಡಿ ಒಂದೇ ಸಮನೆ ಧಾಳಿ ಇಟ್ಟಿತು. ಸುಮಾರು ೫೦ ಮೀಟರ್ ನಷ್ಟು ದೂರ ಕೃಷಿಕ ಲೋಕೇಶರನ್ನು ಅಟ್ಟಿಸಿಕೊಂಡು ಹೋದಾಗ ದುರಾದೃಷ್ಟವಶಾತ್ ಲೋಕೇಶ್ ಬಲಗಾಲಿಗೆ ಕಾಡಾನೆಯ ಒದೆತದ ರಭಸಕ್ಕೆ ಲೋಕೇಶ್ ಕಾಲೆತ್ತಲಾರದೆ ಅಲ್ಲೇ ಕುಸಿದರು.

ಜೀವ ಉಳಿಸಿದ ಸಿಲ್ವರ್ ಮರ ಹಾಗೂ ಕಾಫಿ ಬುಡ

ಕಾಡಾನೆ ಒದೆತದಿಂದಾಗಿ ಕಾಲು ಮುರಿತಗೊಂಡು ಗಂಭೀರವಾಗಿ ಗಾಯಗೊಂಡ ಲೋಕೇಶ್ ಅವರ ಎದೆಯಿಂದ ತಲೆಯ ಭಾಗಕ್ಕೆ ಸಿಲ್ವರ್ ಮರದ ಬುಡ ರಕ್ಷಾ ಕವಚವಾದರೆ, ಮತ್ತೊಂದು ಬದಿಯಲ್ಲಿದ್ದ ಕಾಫಿ ಬುಡ ಈ ಲೋಕೇಶನಿಗೆ ಇನ್ನೊಂದು ಬದಿಯ ರಕ್ಷಾಕವಚವಾಯಿತು. ಹಾಗಾಗಿ ಆಕ್ರೋಷಗೊಂಡ ಕಾಡಾನೆ ಕುಸಿದು ಬಿದ್ದ ಲೋಕೇಶ ಅವರನ್ನು ಕಾಲಿನಿಂದ ಒಂದೇ ಸಮನೆ ಬೆನ್ನಿನ ಹಿಂಬದಿಗೆ ಒದ್ದು ಘಾಸಿ ಮಾಡಿದೆ. ಹಾಗಂತ ಆ ದಿನ ನಡೆದ ಪ್ರಸಂಗವನ್ನು ಗಾಯಾಳು ಲೋಕೇಶರೇ ಹೇಳಿಕೊಂಡಿದ್ದಾರೆ.

ನನ್ನನ್ನು ಬೆನ್ನಟ್ಟಿ ಬಂದ ಕಾಡಾನೆ ನನ್ನನ್ನು ಗಂಭೀರವಾಗಿ ಗಾಯಗೊಳಿಸಿ ೮ ರಿಂದ ೧೦ ನಿಮಿಷ ನನ್ನ ಬಳಿಯೇ ನಿಂತಿತ್ತು. ನನಗೆ ಅದರ ಬಾಲ ಮಾತ್ರ ಕಾಣುತ್ತಿತ್ತು. ನಾ ಮಿಸುಕಾಡದೇ ಹಾಗೇ ಮಲಗಿದ್ದು ನೋಡಿ ಜೀವ ಹೋಗಿದೆ ಎಂದು ತೆರಳಿತು. ಈ ಸಂದರ್ಭ ಒದೆತದ ನೋವು ತಾಳಲಾರದೆ ಜೀವ ಭಯದಿಂದ ಉಸಿರು ಗಟ್ಟಿಯಾಗಿ ಬಿಗಿಹಿಡಿದೆ. ನಾನೇನಾದರೂ ನೋವು ಸಹಿಸದೇ ಕಿರುಚಿದ್ದರೆ ಬದುಕಿದ್ದಾನೆ ಅಂತಾ ಮತ್ತೆ ಮತ್ತೆ ತುಳಿದು ಸಾಯಿಸುತ್ತಿತ್ತೋ ಏನೋ...

ನಾನಂತು ಇನ್ನು ಬದುಕಲ್ಲ ಅಂದುಕೊAಡೆ. ಅಯ್ಯೋ ದೇವರೆ ಅರ್ಧಂಬರ್ಧ ಜೀವ ಉಳಿಸಬೇಡ. ಒಂದೇ ಬಾರಿ ಜೀವ ತಗೊಂಡು ಬಿಡು ಎಂದು ಮನಸಲ್ಲೇ ಬೇಡಿದೆ ಎಂದು ಆ ದಿನದ ಆ ಕ್ಷಣದ ಘಟನೆ ವಿವರಿಸುವಾಗ ಲೋಕೇಶ್ ಅವರ ಕಣ್ಣುಗಳಷ್ಟೇ ಅಲ್ಲಾ ಅಲ್ಲಿದ್ದ ಇಡೀ ಕುಟುಂಬ ಸದಸ್ಯರ ಕಣ್ಣಾಲಿಗಳು ತೇವಗೊಂಡವು.

ಜೀವ ಉಳಿಸಿದ ‘ಇನ್ ಕಮಿಂಗ್’ ಕಾಲ್

ಕಾಡಾನೆಯನ್ನು ಹಿಮ್ಮೆಟ್ಟಿಸಲು ಹಣೆಗೆ ಟಾರ್ಚ್ ಕಟ್ಟಿಕೊಂಡು ಚಡ್ಡಿ ಜೇಬಲ್ಲಿ ಕೀಪ್ಯಾಡ್ ಫೋನ್ ಇಟ್ಟು ಹೋಗಿದ್ದ ಲೋಕೇಶ್ ಅವರ ಪೋನಿಗೆ ಬಂದ ಪಕ್ಕದ ಜಮೀನಿನ ಅಶೋಕ್ ಅವರ ಫೋನ್ ಕರೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಲು ನೆರವಾಯಿತು ಎನ್ನುತ್ತಾರೆ ಅಶೋಕ್ ಪತ್ನಿ ನಿಮಿತ.

ಪಕ್ಕದ ಜಮೀನಿನ ಅಶೋಕ್ ಎಂಬವರು ಈ ಲೋಕೇಶರಿಗೆ ಕರೆ ಮಾಡಿ ಎಲ್ಲಿದ್ದೀಯಾ...? ಆನೆಗಳು ಎಲ್ಲಿ ಹೋದವು ಎಂದು ಕೇಳಲು ಕರೆ ಮಾಡಿದಾಗ ಅರ್ಧಂಬರ್ಧ ಪ್ರಜ್ಞಾವಸ್ಥೆಯಲ್ಲಿಯೇ ಲೋಕೇಶ ಜೇಬಲ್ಲಿ ಕೈ ಹಾಕಿ ಫೋನ್ ರಿಸೀವ್ ಮಾಡಿ ನನಗೆ ಕಾಡಾನೆ ತುಳಿದಿದೆ. ಇಲ್ಲಿ ಬಿದ್ದಿದ್ದೇನೆ ಎಂದು ಹೇಳಿದ್ದಾರೆ. ಕಾಡಾನೆಗಳ ಭಯದಿಂದಲೇ ಲೋಕೇಶ ಅವರನ್ನು ಹುಡುಕಾಡಿದ ಅಶೋಕ್ ಬಳಿಕ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಇದೀಗ ಆರು ತಿಂಗಳ ವಿಶ್ರಾಂತಿ ಚಿಕಿತ್ಸೆಗಾಗಿ ಮನೆಗೆ ಕರೆತರಲಾಗಿದೆ.

ಅರಣ್ಯ ಇಲಾಖೆಗೆ ಶ್ಲಾಘನೆ

ಕಾಡಾನೆಯಿಂದ ಮಾರಣಾಂತಿಕವಾಗಿ ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ತಕ್ಷಣವೇ ಸ್ಪಂದಿಸಿದ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಸಿಬ್ಬಂದಿಗಳು ಮೈಸೂರಿಗೆ ಕರೆದೊಯ್ದು ಜೀವ ಉಳಿಸಿದ್ದಾರೆ. ಆಸ್ಪತ್ರೆಯ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿದ್ದಾರೆ ಎಂದು ಲೋಕೇಶ್ ಕುಟುಂಬ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿತು.

ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ : ಆರ್‌ಎಫ್‌ಓ ಹಾರಂಗಿ ಭಾಗದ ಅತ್ತೂರಿನಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಅತ್ತೂರು ಅರಣ್ಯದ ಆರುವರೆ ಕಿಮೀ ದೂರ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಶಾಶ್ವತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ‘ಶಕ್ತಿ'ಗೆ ವಿವರಿಸಿದರು. - ಕೆ.ಎಸ್. ಮೂರ್ತಿ, ಕುಶಾಲನಗರ