*ಸಿದ್ದಾಪುರ, ಏ. ೧೧: ಅಭ್ಯತ್‌ಮಂಗಲದ ಶ್ರೀ ವೈದ್ಯನಾಥೇಶ್ವರ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ಶ್ರೀ ಚಾಮುಂಡೇಶ್ವರಿ ಕತ್ತಲಕಾನದ ಗುಳಿಗ, ಜಾಗದ ಗುಳಿಗ, ಪಂಜುರ್ಲಿ ಗುಳಿಗ ಹಾಗೂ ರಾಹುಗುಳಿಗ ನೇಮೋತ್ಸವ ಭಕ್ತರ ಗಮನ ಸೆಳೆಯಿತು. ಇದಕ್ಕೂ ಮೊದಲು ಶ್ರೀ ವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ, ಕೋಟೆದ ಬಬ್ಬುಸ್ವಾಮಿ ಮತ್ತು ತಂಗಡಿ ತನ್ನಿಮಾನಿಗ ದೈವಗಳ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಮಂಗಳೂರು ಕುತ್ತೂರಿನ ನವೀನ್, ನಮೀತ್, ರೀತು ಹಾಗೂ ಶರತ್ ತಂಡದಿAದ ದೈವಕೋಲಗಳು ನಡೆದವು. ನೇಮೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಮಿಥುನ್ ನಾರಾಯಣ, ಪ್ರಮುಖರಾದ ವಿನೋದ್, ವಿಶ್ವನಾಥ್, ಚೇತನ್, ಜೀವನ್ ಹಾಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಕಳೆದ ೪೦ ವರ್ಷಗಳಿಂದ ಈ ದೇವಾಲಯದಲ್ಲಿ ಬಬ್ಬುಸ್ವಾಮಿ, ತಂಗಾಡಿ, ಪಂಜುರ್ಲಿ ಗುಳಿಗ, ಚಾಮುಂಡೇಶ್ವರಿ, ಜೋಡು ಗುಳಿಗ ಹಾಗೂ ರಾಹು ಗುಳಿಗ ದೈವಗಳ ಕೋಲ ಭಕ್ತರನ್ನು ಆಕರ್ಷಿಸುತ್ತಿದೆ. ಕಳೆದ ೧೦ ವರ್ಷಗಳಿಂದ ನೇಮೋತ್ಸವ ವಿಜೃಂಭಣೆಯಿAದ ನಡೆಯುತ್ತಿದ್ದು, ಸಿದ್ದಾಪುರ, ನೆಲ್ಲಿಹುದಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ ಮುಂತಾದ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ದೈವಶಕ್ತಿಯ ಹಿನ್ನೆಲೆಯ ಕಥಾ ಹಂದರವನ್ನು ಹೊಂದಿರುವ “ಕಾಂತಾರ” ಚಿತ್ರ ತೆರೆ ಕಂಡ ನಂತರ ಮತ್ತಷ್ಟು ಪ್ರಭಾವಿತಗೊಂಡಿರುವ ಈ ಭಾಗದ ಜನ ವೈದ್ಯನಾಥೇಶ್ವರ ದೇವಾಲಯದಲ್ಲಿ ಮೂರು ದಿನ ನಡೆದ ದೈವ ಕೋಲಗಳಿಗೆ ಸಾಕ್ಷಿಯಾದರು.