ವೀರಾಜಪೇಟೆ, ಏ. ೧೧: ವಿದ್ಯಾರ್ಥಿಗಳು ಸಾರ್ವಜನಿಕ ಸಭೆ ಮತ್ತು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಐಕ್ಯೂಎಸಿ ಮತ್ತು ಉದ್ಯೋಗ ಕೋಶ ಸಮಿತಿ ಹಾಗೂ ಜೆಸಿಐ ಪೊನ್ನಂಪೇಟೆ ನಿಸರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಣಾಮಕಾರಿ ಭಾಷಣ ಕಲೆ ಮತ್ತು ಸಂಸತ್ತಿನ ನಡವಳಿ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಅವರು, ನಾಯಕತ್ವದ ಗುಣ ಮತ್ತು ಪ್ರತಿಭಟಿಸುವ ಮನೋಭಾವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ಪ್ರಸಕ್ತ ರಾಜಕೀಯದ ಕುರಿತು ಜ್ಞಾನ ಪಡೆದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜೆಸಿಐ ಪೊನ್ನಂಪೇಟೆ ನಿಸರ್ಗದ ಅಧ್ಯಕ್ಷ ನೀತ್ ಅಯ್ಯಪ್ಪ ಮಾತನಾಡಿ, ಸಮಾಜದ ಕಲ್ಯಾಣಕ್ಕಾಗಿ ನಮ್ಮ ಸಂಸ್ಥೆಯು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ರಾಷ್ಟçದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜ ಸೇವೆಯೇ ನಮ್ಮ ಗುರಿಯಾಗಿದ್ದು ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಜೆಸಿಐನ ಕಾರ್ಯದರ್ಶಿ ಶರತ್ ಸೋಮಣ್ಣ ಮತ್ತು ಕಾಲೇಜಿನ ಉದ್ಯೋಗ ಕೋಶ ಸಮಿತಿ ಸಂಚಾಲಕರಾದ ರಘುರಾಜ್ ಆರ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಜೆಸಿಐ ಇಂಡಿಯಾದ ಪ್ರಧಾನ ತರಬೇತುದಾರ ಸಂದೀಪ್ ವಿಜಯನ್ ಪರಿಣಾಮಕಾರಿ ಭಾಷಣ ಕಲೆ ಮತ್ತು ಸಂವಹನ ಕೌಶಲ ಕುರಿತು ತರಬೇತಿ ನೀಡಿದರು.

ಮತ್ತೋರ್ವ ತರಬೇತುದಾರ ರಾಜೀವ್ ನಾಯಕತ್ವದ ಗುಣ ಮತ್ತು ಸಂಸತ್ತಿನ ಸಭಾ ನಡಾವಳಿ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಾಗಾರದ ಸದುಪಯೋಗವನ್ನು ಅಂತಿಮ ಪದವಿ ವಿದ್ಯಾರ್ಥಿಗಳು ಪಡೆದುಕೊಂಡರು.