ಮಡಿಕೇರಿ, ಏ. ೧೧: ನಗರದಲ್ಲಿ ನೂತನವಾಗಿ ರೂ. ೯.೯೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಪೊಲೀಸ್ ಕಚೇರಿಯ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಸೇವೆಗೆ ಸಿದ್ಧಗೊಳ್ಳುತ್ತಿದೆ. ವಿಶಾಲವಾದ ಜಾಗದಲ್ಲಿ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಕಟ್ಟಡ ನಿರ್ಮಾಣಗೊಂಡಿದೆ. ಸದ್ಯದಲ್ಲಿಯೇ ಕಟ್ಟಡ ಸೇವೆಗೆ ಲಭ್ಯವಾಗಲಿದೆ.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ

ರೂ. ೯ ಕೋಟಿ ೯೦ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಪೊಲೀಸ್ ಭವನದ ಯೋಜನೆ ರೂಪಿಸಲಾಗಿತ್ತು. ೨೦೨೧ರ ಮಾರ್ಚ್ನಲ್ಲಿ ಬೆಂಗಳೂರು ಮೂಲದ ಕಂಪನಿಯೊAದು ಟೆಂಡರ್ ಮೂಲಕ ನಿರ್ಮಾಣದ ಜವಾಬ್ದಾರಿ ಹೊತ್ತು ಕೆಲಸ ಆರಂಭಿಸಿತ್ತು. ೫-೦೩-೨೦೨೩ ರೊಳಗೆ ಕಾಮಗಾರಿ ಮುಗಿಸುವ ಗುರಿಯನ್ನು ಹೊಂದಿತ್ತಾದರು ಮಳೆಗಾಲದ ಹಿನ್ನೆಲೆ ಕೊಂಚ ತೊಡಕು ಉಂಟಾಯಿತು. ಇದೀಗ ಎಲ್ಲಾ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ವಿದ್ಯುತ್ ಸಂಬAಧಿತ, ಒಳವಿನ್ಯಾಸ, ನೀರಿನ ವ್ಯವಸ್ಥೆ, ಪೀಠೋಪಕರಣ, ಜೋಡಣೆ ಯಂತಹ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ.

ಜೊತೆಗೆ ಪಾರ್ಕ್, ತಡೆಗೋಡೆ ನಿರ್ಮಾಣವಾಗಬೇಕಾಗಿದೆ.

ಕಟ್ಟಡದಲ್ಲಿ ಏನಿರಲಿದೆ?

ನೂತನ ಪೊಲೀಸ್ ಸಂಕೀರ್ಣದಲ್ಲಿ ನೆಲಅಂತಸ್ತು ಹಾಗೂ ೩ ಮಹಡಿಗಳಿರಲಿವೆ. ನೆಲಅಂತಸ್ತಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಸಾಮಾನ್ಯ ಸಂಗ್ರಹ ಶಾಖೆ, ಬಾಲಾಪರಾಧಿ ಕೊಠಡಿ, ಮಹಿಳಾ ಸಿಬ್ಬಂಧಿಗಳ ಕೊಠಡಿ, ಜಿಲ್ಲಾ ಗುಪ್ತಚರದಳ, ಅಪರಾಧ ದಾಖಲಾತಿ ಘಟಕ, ಹಿರಿಯ ನಾಗರಿಕರ ಕೊಠಡಿ, ಸಾರ್ವಜನಿಕ ಕುಂದುಕೊರತೆ ಕೊಠಡಿ, ಬೆರಳಚ್ಚು ಘಟಕ, ವಿಧಿವಿಜ್ಞಾನ ಘಟಕ ಇದೆ.

ಮೊದಲ ಅಂತಸ್ತಿನಲ್ಲಿ ವರಿಷ್ಠಾಧಿಕಾರಿ ಕಚೇರಿ ಒಳಗೊಂಡAತೆ ಸಭಾಂಗಣ, ತಾಂತ್ರಿಕ ವಿಭಾಗ, ಸಿಬ್ಬಂದಿ ಶಾಖೆ ಇನ್ನಿತರ ಕಚೇರಿಗಳಿರಲಿದ್ದು, ೨ನೇ ಮಹಡಿಯಲ್ಲಿ ಕಂಟ್ರೋಲ್ ರೂಂ, ಮಹಿಳಾ ಡ್ರೆಸ್ಸಿಂಗ್ ರೂಂ, ಸಿಬ್ಬಂದಿಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ.

ವಿಶೇಷವಾಗಿ ಕುಂದುಕೊರತೆ ಆಲಿಸಲು ಪ್ರತ್ಯೇಕ ಕಟ್ಟಡ ಇದೆ. ಇಡೀ ಕಟ್ಟಡ ವಿಶಾಲವಾಗಿದ್ದು, ಮಡಿಕೇರಿಯ ವಾತಾವರಣಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ.

ತಡೆಗೋಡೆ ನಿರ್ಮಾಣ

ನಗರಸಭೆಯ ಅನುದಾನದಲ್ಲಿ ರಾಜಕಾಲುವೆಗೆ ಹೊಂದಿಕೊAಡAತೆ ಬರೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಸಮರ್ಪಕ ಚರಂಡಿ ವ್ಯವಸ್ಥೆ, ಶೌಚಾಲಯವನ್ನೂ ನಿರ್ಮಿಸಲಾಗಿದ್ದು, ಪೊಲೀಸ್ ಸೇವೆ ಪಡೆಯುವವರಿಗೆ ಪೂರಕ ಸೌಲಭ್ಯ ನೀಡುವ ನಿಟ್ಟಿನಲ್ಲಿ ಚಿಂತಿಸಿ ಕಟ್ಟಡ ನಿರ್ಮಿಸಲಾಗಿದೆ.

ಉದ್ಘಾಟನೆ ಎಂದು?

ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ವಿವಿಧ ಕಾಮಗಾರಿಗಳ ಉದ್ಘಾಟನೆ ಸಾಲಿನಲ್ಲಿ ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದರು. ಆದರೆ, ಅಧಿಕೃತವಾಗಿ ಕಾರ್ಯಕ್ರಮ ರೂಪಿಸಿ ಮತ್ತೊಮ್ಮೆ ಉದ್ಘಾಟಿಸಬೇಕೆಂಬ ಹಂಬಲ ಇಲಾಖೆಗಿದೆ.

ಇದರೊಂದಿಗೆ ಹಳೇ ಪೊಲೀಸ್ ಕಚೇರಿಯಲ್ಲಿ ಮುಂದಿನ ಕಾರ್ಯಚಟುವಟಿಕೆ ಕುರಿತು ಇನ್ನೂ ತೀರ್ಮಾನಿಸಿಲ್ಲ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದುವರೆಯಲಾಗುತ್ತದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಇರುವ ಕಚೇರಿಯ ಆವರಣದಲ್ಲಿರುವ ಘಟಕಗಳು ಅಲ್ಲಿಯೇ ಮುಂದುವರೆಯುವ ಸಾಧ್ಯತೆ ಇದೆ.

- ಹೆಚ್.ಜೆ. ರಾಕೇಶ್