ಸೋಮವಾರಪೇಟೆ, ಏ. ೧೧: ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮದ ಯುಕೆಜಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್. ರಮೇಶ್, ಹೆಚ್ಚಿನ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಾ ಸಾಗಿದ್ದು, ನಮ್ಮ ಶಾಲೆಯ ಆಂಗ್ಲ ಮಾಧ್ಯಮ ವಿಭಾಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆ ಗೊಳ್ಳುತ್ತಿದ್ದಾರೆ. ಶಾಲೆಯ ಮೇಲಿನ ಅಭಿಮಾನದಿಂದ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದು, ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಮುಂದೆಯೂ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಒಳ್ಳೆಯ ಶಿಕ್ಷಣ ನೀಡುವ ಯೋಜನೆ ಇದ್ದು, ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಪೋಷಕರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದರು.

ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್, ಪೋಷಕರ ಸಮಿತಿ ಅಧ್ಯಕ್ಷ ಮಿಥುನ್, ಉಪಾಧ್ಯಕ್ಷೆ ಅರ್ಚನ, ಸದಸ್ಯ ಗಿರೀಶ್ ಮತ್ತಿತರರು ಇದ್ದರು.