ಮಡಿಕೇರಿ, ಏ. ೧೧: ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋ ವಿಜೇತೆ ಪ್ರಗತಿ ಬಡಿಗೇರ್, ಈ ಬಾರಿಯ ಚುನಾವಣಾ ರಾಯಭಾರಿ ಹಾಗೂ ಶಿಕ್ಷಕರೂ ಆಗಿರುವ ಬಸವರಾಜ್ ಬಡಿಗೇರ್, ರಾಷ್ಟç ಮಟ್ಟದ ಹಾಕಿ ಪಂದ್ಯಾಟಕ್ಕೆ ಆಯ್ಕೆಯಾದ ಶಾಲೆಯ ವಿದ್ಯಾರ್ಥಿಗಳಾದ ಚಿರಾಗ್ ಜೆ. ಕೋಟ್ಯಾನ್, ಡೆಬ್ ಮಲ್ಯ ಮೈಟಿ, ಎನ್.ಪಿ. ಬೋಪಣ್ಣ, ಚರಿತ್ ರಾಜ್, ಎನ್.ಡಿ. ದಿಗಂತ್, ಯುವರಾಜ್ ಶೆಟ್ಟಿ, ಹೆಚ್. ಹೆಚ್. ಪ್ರೀತಂ, ತನ್ಮಯ್ ಕಾಳಪ್ಪ, ಕೃತಿಕ, ತಾನ್ಯ ಸೇರಿದಂತೆ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಕೆ.ಟಿ. ವಿಸ್ಮಯಿ, ಹಾಕಿ ತರಬೇತುದಾರೆ ಬಿಂದ್ಯಾ, ದೈಹಿಕ ಶಿಕ್ಷಕ ಸಂದೇಶ್, ಮುಖ್ಯ ಶಿಕ್ಷಕಿ ಸುಶೀಲಾ ಅವರುಗಳನ್ನು ಸನ್ಮಾನಿಸಲಾಯಿತು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಕೆ.ಟಿ. ವಿಸ್ಮಯಿ ಮಾತನಾಡಿ, ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಓದುತ್ತಿದ್ದು, ಕ್ರೀಡಾಪಟುಗಳ ಸಾಧನೆಗೆ ಶಿಕ್ಷಕರ ಹಾಗೂ ಪೋಷಕರ ಪಾತ್ರ ದೊಡ್ಡ ಸ್ಥಾನವಹಿಸಿದೆ. ಮಕ್ಕಳನ್ನು ಉತ್ತೇಜಿಸುವ ಕೆಲಸ ನಾವು ಮಾಡಬೇಕು. ಕ್ರೀಡೆ ಜೊತೆಗೆ ಓದಿಗೂ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಬಡಿಗೇರ್, ತನ್ನ ಮಗಳು ಪ್ರಗತಿ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು. ಮಡಿಕೇರಿಯಲ್ಲಿ ನಡೆದ ಆಡಿಷನ್‌ನಲ್ಲಿ ಸ್ಪರ್ಧಿಸಿ ಮೆಗಾ ಆಡಿಷನ್‌ಗೆ ಆಯ್ಕೆಯಾಗಿ ಇದೀಗ ವಿಜೇತಗೊಂಡಿದ್ದಾಳೆ. ಸಂಗೀತ ಕಲಿತರೆ ಮಾತ್ರ ಹಾಡು ಕಲಿಯಬೇಕೆಂದಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಕಲಿಕೆಗೆ ಮುಕ್ತ ಅವಕಾಶವಿದೆ .ಶ್ರದ್ಧೆಯಿಂದ ಕಲಿತರೆ ಸಾಧನೆ ಖಚಿತ ಎಂದರು.

ಮಾರ್ಗದರ್ಶಕ ಶಿಕ್ಷಕಿಯಾಗಿ ಪಾಲ್ಗೊಂಡು ಮಾತನಾಡಿದ ಸಂತ ಮೈಕಲರ ಶಾಲೆಯ ಶಿಕ್ಷಕಿ ಜೋಯ್ಸಿ, ಬೇಸಿಗೆ ರಜೆಯಲ್ಲಿಯೂ ಕೆಲಕಾಲ ಓದಿಗೆ ಸಮಯ ಮೀಸಲಿಡಿ. ಮಗ್ಗಿ, ಲೆಕ್ಕ, ಇಂಗ್ಲೀಷ್, ಹಿಂದಿ ವಿಷಯವನ್ನು ಹೆಚ್ಚಾಗಿ ಅಭ್ಯಾಸ ಮಾಡುವಂತೆ ಸಲಹೆ ನೀಡಿದರು.

ಈ ಸಂದರ್ಭ ಸ್ಕೌಡ್ ಮತ್ತಯ ಗೈಡ್ಸ್ ಸಹಾಯಕ ಆಯುಕ್ತ ಜಿಮ್ಮೆ ಸಿಕ್ವೇರ ಎಸ್.ಡಿ.ಎಂ.ಸಿ. ಸದಸ್ಯೆ ರೇಷ್ಮಾ, ಶಿಕ್ಷಕರುಗಳಾದ ಜಯಮ, ಮಂಜುಳಾ, ತೇಜಸ್ವಿನಿ, ಕವಿತಾ, ಮೋಹನ ಕುಮಾರಿ, ಇಂದ್ರಾಣಿ ಹಾಜರಿದ್ದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು.