*ಗೋಣಿಕೊಪ್ಪ, ಏ. ೧೧ : ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿ ಮುಂದುವರಿಯಲಿದ್ದು, ಇದಕ್ಕೆ ಬಿಜೆಪಿ ಸರ್ಕಾರದ ಜನಪರ ಯೋಜನೆಗಳೇ ಕಾರಣ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಕಕೂನ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಪಕ್ಷವು ಜಿಲ್ಲೆಯ ಗ್ರಾಮ ಪಂಚಾಯಿತಿಯಿAದ ಸಂಸದರವರೆಗೂ ಆಡಳಿತ ನಡೆಸುತ್ತಿದೆ. ಹೀಗೆ ಜಿಲ್ಲೆಯ ಎರಡು ವಿಧಾನಸಭಾ ಸ್ಥಾನ ಕೂಡ ಮುಂದುವರಿಯಲಿದೆ. ಅಭ್ಯರ್ಥಿಯಾಗಿ ಆಕಾಂಕ್ಷಿ ಎಂಬುವುದನ್ನು ನಾನು ತಿಳಿಸುವ ಪ್ರಯತ್ನ ಮಾಡಿಲ್ಲ. ಟಿಕೆಟ್ ನೀಡಿದರೆ, ಬೇರೆಯವರಿಗೆ ನೀಡಿದರೂ ಎರಡು ಸ್ಥಾನವನ್ನು ಗೆಲ್ಲಿಸಲು ಬದ್ಧವಾಗಿದ್ದೇನೆ. ಮಡಿಕೇರಿ ಕ್ಷೇತ್ರದಲ್ಲಿ ಗೌಡ ಜನಾಂಗದವರು ಹೆಚ್ಚಿದ್ದರೂ ಅಪ್ಪಚ್ಚು ರಂಜನ್ ಗೆಲುವು ಪಡೆಯುತ್ತಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ನನ್ನನ್ನು ಮೂರು ಬಾರಿಯೂ ಗೆಲ್ಲಿಸಿದ್ದಾರೆ. ಆದ್ದರಿಂದ ಜಾತಿವಾರು ಲೆಕ್ಕಚಾರ ಬರುವುದಿಲ್ಲ ಎಂದರು.
ಬಿಜೆಪಿ ಸರ್ಕಾರ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಮೊದಲ ಬಾರಿ ಅನುದಾನ ನೀಡಿದ ಹೆಮ್ಮೆಯ ಸರ್ಕಾರವಾಗಿದೆ. ೧ ಕೋಟಿ ಅನುದಾನ ನೀಡಲಾಗುತ್ತಿದೆ. ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆಗೆ ಅನುದಾನ ನೀಡಿದ್ದು ಕೂಡ ಬಿಜೆಪಿ ಸರ್ಕಾರ. ರೈತರಿಗೆ ಬೆಳೆ ಪರಿಹಾರ ಯೋಜನೆಯಲ್ಲಿ ಕಾಫಿ ಬೆಳೆಯನ್ನು ಸೇರಿಸಿ ಹೆಕ್ಟೇರ್‌ಗೆ ೫೬ ಸಾವಿರ ನೀಡಿದೆ. ವಾಜಪೇಯಿ ಸರ್ಕಾರ ಇದ್ದಾಗ ಗಿರಿಜನರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಗಿರಿಜನರಿಗೆ ಮೂಲಭೂತ ಸೌಕರ್ಯ ನೀಡಲಾಗುತ್ತದೆ. ಜಿಲ್ಲೆಯಲ್ಲಿ ೪ ಸಾವಿರ ಗಿರಿಜನರಿಗೆ ಹಕ್ಕುಪತ್ರ ನೀಡಲಾಗಿದೆ. ಕಾಂಕ್ರಿಟ್ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ನೀಡಿದೆ. ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ೪೦ ಕೋಟಿ ಅನುದಾನ ಬಳಸಲಾಗಿದೆ. ಇದೆಲ್ಲವೂ ಬಿಜೆಪಿ ಪಕ್ಷದ ಜನಪರ ಯೋಜನೆಗಳಾಗಿವೆ. ಅನಾವಶ್ಯಕ ಬೇರೆ ಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿಗೆ ೨ ಸಾವಿರ ಕೋಟಿ ಅನುದಾನ ನಮ್ಮ ಸರ್ಕಾರ ಅನುಷ್ಠಾನ ಮಾಡಿದೆ. ಮಡಿಕೇರಿ-ಕುಟ್ಟ, ಬೈಂದೂರು-ವೀರಾಜಪೇಟೆ, ಕೋಣನೂರು-ಮಾಕುಟ್ಟ ಹೆದ್ದಾರಿ ಶಾಶ್ವತವಾಗಿ ಮೇಲ್ದರ್ಜೆಗೇರಿದೆ. ರಸ್ತೆ ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ಧನಿದ್ದೇನೆ. ಜಿಲ್ಲೆಯ ಎಲ್ಲ ರಸ್ತೆಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಅಭಿವೃದ್ಧಿ ಮಂತ್ರವಾಗಿದೆ ಎಂದರು. ಪುಣ್ಯ ಕ್ಷೇತ್ರ ತಲಕಾವೇರಿ ೧೨ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಿದೆ. ಟರ್ಫ್ ಹಾಕಿ ಮೈದಾನ, ಕಾಲೇಜು ಮಂಜೂರು, ಅನುಷ್ಠಾನ, ವಸತಿ ಶಾಲೆ ನಿರ್ಮಾಣದ ಮೂಲಕ ಶಿಕ್ಷಣಕ್ಕೂ ಬೆಂಬಲ ನೀಡಿದೆ. ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರಕ್ಕೂ ಅನುದಾನ ನೀಡಿದೆ ಎಂದರು.
ಪೊನ್ನAಪೇಟೆ ತಾಲೂಕು ರಚನೆ ನಂತರ ಮಿನಿ ವಿಧಾನಸೌಧ ನಿರ್ಮಾಣಕ್ಕೆ ೧೨ ಕೋಟಿ ಮೀಸಲಿಟ್ಟಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಮಾತ್ರ ಉಳಿದಿದೆ. ಸಿಬ್ಬಂದಿ ಕೊರತೆ ನೀಗಿಸಿಕೊಂಡು ಜನರ ಸೇವೆ ನೀಡಲಾಗುತ್ತದೆ ಎಂದರು.
ಕೂಟಿಯಾಲ ಸೇತುವೆ ಮಾರ್ಗದಲ್ಲಿ ಅರಣ್ಯದಲ್ಲಿರುವ ೬೦೦ ಮೀಟರ್ ಸಂಪರ್ಕಕ್ಕೆ ಅನುಮತಿಗೆ ಕಾಯಲಾಗುತ್ತಿದೆ. ಅರಣ್ಯ ಪ್ರದೇಶವಿರುವ ಕಡಮಕಲ್ಲ್, ಸುಬ್ರಮಣ್ಯ ರಸ್ತೆ, ತೊಡಿಕಾನ ಸಂಪರ್ಕ ವಿಚಾರದಲ್ಲಿ ಕೂಡ ನ್ಯಾಯಾಲಯದಲ್ಲಿ ಧಾವೆ ಎದುರಿಸುತ್ತಿದ್ದೇವೆ. ಕಾನೂನು ಉಲ್ಲಂಘನೆ ಆರೋಪದಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಆಗಿನ ಎಂಎಲ್‌ಸಿ ಎಸ್.ಜಿ. ಮೇದಪ್ಪ ವಿರುದ್ಧ ಕೇಸ್ ಇದೆ. ಎಲ್ಲವನ್ನೂ ಜನರಿಗಾಗಿ ಎದುರಿಸುತ್ತಿದ್ದೇವೆ ಎಂದರು.
ಜಮ್ಮ ಬಾಣೆ ಸಮಸ್ಯೆಗೆ ರಾಷ್ಟçಪತಿ ಮೂಲಕ ತಿದ್ದುಪಡಿಗೆ ಒಪ್ಪಿಗೆ ಪಡೆದು ಕಾಯ್ದೆಯಾಗಿ ರೂಪಿಸುವಲ್ಲಿ ಬಿಜೆಪಿ ಸರ್ಕಾರದ ಸಾಧನೆ ಮುಖ್ಯ. ಈ ವಿಚಾರದಲ್ಲಿ ನಾನು ಖುದ್ದು ಸರ್ಕಾರದ ಮೂಲಕ ಪರಿಹಾರ ತಂದಿದ್ದೇನೆ. ಇದರಿಂದ ರೈತರು ಕೇವಲ ಬಳಕೆಗಷ್ಟೆ ಮೀಸಲಾಗಿದ್ದ ಭೂಮಿಯಲ್ಲಿ ಮಾಲೀಕತ್ವ ಪಡೆಯಲು ಅವಕಾಶವಾಯಿತು ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರಾದ ಸಿಂಗಿ ಸತೀಶ್, ದರ್ಶನ್ ದೇವಯ್ಯ, ಸದಸ್ಯ ಮನೋಜ್‌ಕುಮಾರ್ ಇದ್ದರು.