ಸೋಮವಾರಪೇಟೆ, ಏ. ೧೧: ಲೋಕೋಪಯೋಗಿ ಇಲಾಖೆ ಮೂಲಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾದ ಶನಿವಾರಸಂತೆ-ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯು ಒಂದು ವರ್ಷದಲ್ಲೇ ಕಿತ್ತು ಬರುತ್ತಿದೆ.
ರಾಜ್ಯ ಹೆದ್ದಾರಿಯ ಡಾಂಬರೀಕರಣ ಸೇರಿದಂತೆ ಚರಂಡಿ, ಅವಶ್ಯ ಕಡೆಗಳಲ್ಲಿ ಮೋರಿ ನಿರ್ಮಾಣಕ್ಕೆಂದು ಲೋಕೋಪಯೋಗಿ ಇಲಾಖೆಯಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕಳೆದ ವರ್ಷ ಕೆಲ ಭಾಗಗಳಲ್ಲಿ ಡಾಮರೀಕರಣ ಮಾಡಲಾಗಿತ್ತು.
ಹೊಸದಾಗಿ ಡಾಂಬರು ಹಾಕಿದ ರಸ್ತೆಯ ಕೆಲ ಭಾಗಗಳಲ್ಲಿ ಕೇವಲ ಒಂದು ವರ್ಷದಲ್ಲೇ ಡಾಂಬರು ಕಿತ್ತು ಬರುತ್ತಿದೆ. ಪಟ್ಟಣ ಸಮೀಪದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಳಿಯ ಬೀರೇಬೆಟ್ಟ, ಚಿನ್ಮಯಿ ಬಡಾವಣೆ, ನ್ಯಾಯಾಲಯದ ಬಳಿ, ಬೀಟಿಕಟ್ಟೆಯ ಬಳಿಯಲ್ಲಿ ಈಗಾಗಲೇ ಡಾಂಬರು ಕಿತ್ತು ಬಂದಿದೆ.
ಈ ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅವಘಡಗಳೂ ಸಂಭವಿಸುತ್ತಿದ್ದು, ದ್ವಿಚಕ್ರ ವಾಹನ ಚಾಲಕರು ಕೆಲವೊಮ್ಮೆ ಗುಂಡಿಗೆ ಬಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗುತ್ತಿದ್ದಾರೆ. ಕಾಮಗಾರಿ ಕೈಗೊಳ್ಳುವ ಸಂದರ್ಭ ನಿಗದಿತ ಪ್ರಮಾಣದಲ್ಲಿ ಡಾಂಬರು ಹಾಕದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೊಸದಾಗಿ ಹಾಕಿರುವ ಡಾಂಬರು ಜಾರಿಕೊಂಡು
(ಮೊದಲ ಪುಟದಿಂದ) ಹೋಗಿದ್ದು, ಹಳೆಯ ರಸ್ತೆ ಗೋಚರಿಸುವ ಮೂಲಕ ಕಾಮಗಾರಿಯ ಗುಣಮಟ್ಟದ ಬಗ್ಗೆ ಕುಹಕವಾಡುತ್ತಿದೆ. ಹೊಸದಾಗಿ ನಿರ್ವಹಿಸಿದ ಕಾಮಗಾರಿ ವರ್ಷವಾಗುವುದರ ಒಳಗೆ ತನ್ನ ನಿಜಬಣ್ಣ ಬಯಲು ಮಾಡಿಕೊಂಡಿದೆ. ಕೆಲಸ ನಡೆಯುತ್ತಿದ್ದ ಸಂದರ್ಭವೇ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಕಳಪೆಯನ್ನು ಪ್ರಶ್ನಿಸಿದರೆ ಧಮಕಿ ಹಾಕುವ ಕೆಲಸ ನಡೆಸಲಾಗಿತ್ತು. ಇದೀಗ ರಸ್ತೆ ಕಿತ್ತು ಬಂದಿದ್ದು, ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ತಕ್ಷಣ ಗುಂಡಿಬಿದ್ದ ರಸ್ತೆಯನ್ನು ದುರಸ್ತಿಪಡಿಸಬೇಕೆಂದು ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ.