ಮಡಿಕೇರಿ, ಏ. ೧೧: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಡಿಕೇರಿ Iಅಖಿಅ ವಿಭಾಗದ ಅನಿತ ಕುಮಾರಿ ಮಾತನಾಡಿ, ಏಡ್ಸ್ ಕುರಿತಾಗಿ ಎಲ್ಲರಲ್ಲೂ ಜಾಗೃತಿ ಮುಖ್ಯ. ಅದರಲ್ಲೂ ಯುವ ಪೀಳಿಗೆಯಲ್ಲಿ ಈ ಕಾಯಿಲೆಯ ಕುರಿತಾಗಿ ಜಾಗೃತಿ ಇದ್ದಲ್ಲಿ ಇದರ ಹರಡುವಿಕೆಯನ್ನು ತಡೆಯಬಹುದಾಗಿದೆ ಎಂದರು. ಏಡ್ಸ್ ಕಾಯಿಲೆಗೆ ತುತ್ತಾದ ವ್ಯಕ್ತಿಗಳು ಹಿಂದೆ ಅತ್ಯಂತ ಕಡಿಮೆ ಸಮಯದಲ್ಲಿ ಸಾವನ್ನಪ್ಪುತ್ತಿದ್ದರು. ಆದರೆ ಇಂದು ವೈದ್ಯಕೀಯ ವಿಜ್ಞಾನ ಮುಂದುವರೆದಿದೆ. ಏಡ್ಸ್ಗೆ ತುತ್ತಾದ ರೋಗಿಗಳ ಆಯಸ್ಸನ್ನು ಹೆಚ್ಚಿಸಲು ನಿರಂತರವಾಗಿ ಸರಿಯಾದ ಸಮಯಕ್ಕೆ ಮಾತ್ರೆಗಳನ್ನು ಸೇವಿಸುವುದರಿಂದ ಸಾಧ್ಯವಿದೆ ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ರೇಖಾ ಚಿಣ್ಣಪ್ಪ ಮಾತನಾಡಿ, ಸಮಾಜದಲ್ಲಿ ಈ ಮಾರಕ ಕಾಯಿಲೆಗೆ ತುತ್ತಾದ ವ್ಯಕ್ತಿಗಳನ್ನು ಕಡೆಗಣಿಸದೆ, ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಕಾಲೇಜಿನ ಉಪನ್ಯಾಸಕರಾದ ರೆಡ್ ರಿಬ್ಬನ್ ಕ್ಲಬ್‌ನ ಸಂಚಾಲಕ ಹರೀಶ್ ಕಿಗ್ಗಾಲು ಈ ಮಾರಕ ರೋಗದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.