ಮಡಿಕೇರಿ, ಏ. ೧೦: ವರದಕ್ಷಿಣೆಗಾಗಿ ಪೀಡಿಸಿದ ಆರೋಪದಡಿ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಎಸ್. ಆಕಾಶ್ ಹಾಗೂ ಅವರ ಕುಟುಂಬದ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಾಶ್ ಡಾ|| ಪತ್ನಿ ವಂದನ ನೀಡಿದ ದೂರಿನ ಅನ್ವಯ ಆಕಾಶ್ ಸೇರಿದಂತೆ ಅವರ ತಂದೆ ಶಂಕರ್, ತಾಯಿ ಚಂದ್ರಿಕಾ, ಸಹೋದರ ವಿಕಾಸ್ ವಿರುದ್ಧ ಮಾರ್ಚ್ ೧೦ರಂದು ಪ್ರಕರಣ ದಾಖಲಾಗಿದೆ.
ಆಕಾಶ್ ಮತ್ತು ತನ್ನ ನಿಶ್ಚಿತಾರ್ಥದ ಸಮಯದಲ್ಲಿಯೇ ಆಕಾಶ್ ತಾಯಿ ವಜ್ರದ ವಾಚ್ಗೆ ಬೇಡಿಕೆ ಇಟ್ಟಿದ್ದು, ನಾವು ರಾಡೋ ವಾಚ್, ಚಿನ್ನದ ಉಂಗುರ ನೀಡಿ ಹಾಗೂ ತನಗೆ ೧೦೦ ಗ್ರಾಂ ಚಿನ್ನಾಭರಣ ಹಾಕಿ ನಿಶ್ಚಿತಾರ್ಥ ಮಾಡಿದ್ದೇವೆ.
(ಮೊದಲ ಪುಟದಿಂದ) ಆ ಬಳಿಕ ಆಕಾಶ್ ತಂದೆ ಬೆಲೆಬಾಳುವ ಕಾರಿಗೆ ಬೇಡಿಕೆಯೊಡ್ಡಿದ್ದು, ಅದನ್ನು ನೀಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ರೂ. ೫೦ ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ವಿವಾಹ ಮಾಡಿದ್ದೇವೆ. ಆನಂತರ ಆಕಾಶ್ ಅನ್ಯ ಮಹಿಳೆಯೊಂದಿಗೆ ಫೋನ್ನಲ್ಲಿ ಮಾತನಾಡಿದ ಬಗ್ಗೆ ಪ್ರಶ್ನಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ವರದಕ್ಷಿಣೆ ತರುವಂತೆ ಹಾಗೂ ಬೆಂಗಳೂರಿನಲ್ಲಿ ಮನೆ ಕೊಡಿಸುವಂತೆ ಕಿರುಕುಳ ನೀಡಿ ಮನೆಯಿಂದ ಆಚೆ ಹಾಕಿದ್ದಾರೆ. ಮಾ. ೫ ರಂದು ಮೈಸೂರಿನಲ್ಲಿರುವ ಆಕಾಶ್ ಮನೆಗೆ ಸಂಧಾನಕ್ಕೆ ತೆರಳಿದ ಸಂದರ್ಭ ಆಕಾಶ್ ಹಾಗೂ ಆತನ ಸಹೋದರ ಮತ್ತೆ ನಿಂದಿಸಿ ಹೊರಕಳುಹಿಸಿದ್ದಾರೆ ಎಂದು ದೂರಿನಲ್ಲಿ ವಂದನ ಉಲ್ಲೇಖಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪೊಲೀಸರು ಐಪಿಸಿ ೧೮೬೦ (೪೯೮ಎ, ೩೨೫, ೫೦೪, ೫೦೬, ೩೪) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.