ಸೋಮವಾರಪೇಟೆ, ಏ. ೧೦: ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿದ್ದು, ಧೀರ್ಘಕಾಲ ಬಾಳಿಕೆ ಬರುವಂತಹ ಕಾಂಕ್ರಿಟ್ ರಸ್ತೆಗೆ ಡಾಂಬರೀಕರಣ ಮಾಡಿದ ಘಟನೆ ನಡೆದಿದೆ.

ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಪ್ರಶ್ನೆ ಮಾಡಬೇಕಾದ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಪಟ್ಟಣದ ಮುಖ್ಯ ರಸ್ತೆಯಿಂದ ಸೋಮೇಶ್ವರ ದೇವಾಲಯದವರೆಗೆ ರಸ್ತೆ ಚೆನ್ನಾಗಿದ್ದರೂ ಅದರ ಮೇಲೆಯೇ ಡಾಂಬರೀಕರಣ ಮಾಡಲಾಗಿದೆ.

ಸದಾ ಜನಜಂಗುಳಿ ಇರುವ ಬಸ್ ನಿಲ್ದಾಣದಿಂದ ಸಿ.ಕೆ. ಸುಬ್ಬಯ್ಯ ರಸ್ತೆಗೆ ತೆರಳುವ ಮಾರ್ಗದಲ್ಲಿ ಕೆಲವು ದಿನಗಳ ಹಿಂದೆ ಚರಂಡಿಯನ್ನು ಅಗೆಯಲಾಗಿದ್ದು ಇದುವರೆಗೂ ಅದನ್ನು ಸರಿ ಪಡಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.