ನಾಪೋಕ್ಲು, ಏ. ೧೦: ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಪೌರಾಣಿಕ ಹಿನ್ನೆಲೆಯ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವವು ತಾ. ೧೨, ೧೩ ರಂದು ನಡೆಯಲಿದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಮೀಪವಿರುವ ಅಮ್ಮಂಗೇರಿಯಲ್ಲಿ ಕಣಿಯ ಜನಾಂಗದವರು ಶುದ್ಧ, ಶ್ರದ್ಧಾಭಕ್ತಿಯಿಂದ ಓಲೆಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ದೈವ ದರ್ಶನ ಹಾಗೂ ಎತ್ತೇರಾಟ, ತಕ್ಕ ಮುಖ್ಯಸ್ಥರು, ಭಕ್ತಾದಿಗಳೊಂದಿಗೆ ಪನ್ನಂಗಾಲತ್ತಮ್ಮೆ ದೇವಸ್ಥಾನಕ್ಕೆ ತಾ. ೧೨ ರಂದು ಮಧ್ಯಾಹ್ನ ತರಲಾಗುವುದು.

ಇದಕ್ಕೂ ಮೊದಲು ಬೆಳಿಗ್ಗೆ ಅಂಜಪರವAಡ ಮನೆಯಿಂದ ಭಂಡಾರ ತಂದು ದೇವರ ಮೂರ್ತಿ ಶುದ್ಧೀಕರಿಸಿ ನೂರಾರು ತೆಂಗಿನ ಕಾಯಿ ನೀರಿನಿಂದ ಅಭಿಷೇಕ ಜರುಗಿದ ನಂತರ ದೇವಾಲಯಕ್ಕೆ ಪ್ರದಕ್ಷಣೆ ಬರಲಾಗುವುದು. ಈ ಸಂದರ್ಭ ದೇವರ ಆವೇಶಕ್ಕೆ ಒಳಗಾದ ತಿರುವಳಕಾರರು ರಕ್ತ ಬರುವಂತೆ ತಲೆಗೆ ಖಡ್ಗದಿಂದ ಕಡಿದುಕೊಳ್ಳುವ ದೃಶ್ಯ ಕಂಡುಬರುತ್ತದೆ. ತಾ. ೧೩ ರಂದು ಕುರುಂದ ಕಲಿ ಜರುಗಲಿದ್ದು ಅಂದು ತಿರುಳಕಾರರು ರಕ್ತ ಚಿಮ್ಮುವಂತೆ ತಲೆಗೆ ತೆಂಗಿನಕಾಯಿ ಒಡೆದುಕೊಂಡು ಕುಣಿಯುವ ವಿಶಿಷ್ಟ ರೀತಿಯ ಆಚರಣೆ ನಡೆಯಲಿದೆ.

ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ನೆಲೆಸಿರುವಳೆಂದೂ, ಅಣ್ಣನ ಮನೆಯಿಂದ ಅವಳನ್ನು ತನ್ನ ಮನೆಗೆ ಕರೆತರಲಾಗುವ ಪದ್ಧತಿ ಇದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮತ್ತು ಭಕ್ತರಲ್ಲಿದೆ. ಅಣ್ಣನನ್ನು (ಇಗ್ಗುತ್ತಪ್ಪ) ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿರುವುದೊಂದಿಗೆ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಹಿಂತಿರುಗಲು ಪ್ರಯತ್ನಿಸುವ ಕೊಡೆಯನ್ನು ತಡೆ ಹಿಡಿಯಲು ಶುದ್ಧ ನಿಷ್ಠೆಯಿಂದ ಇರುವ ಇಬ್ಬರು ಕೊಡೆಗೆ ಜೋಡಿಸಿದ ಬಿದಿರನ್ನು ನೆಲಕ್ಕೆ ಒತ್ತಿ ಹಿಡಿದಿದ್ದರೂ ಆ ಕೊಡೆಯು ಗರ್ರನೆ ಸುತ್ತುವುದು ಮತ್ತು ಮೇಲಕ್ಕೆ ಎಳೆಯಲು ಪ್ರಯತ್ನಿಸುವುದು ಶ್ರೀ ಪನ್ನಂಗಾಲತಮ್ಮೆ ದೇವಿಯ ಕಾರಣಿಕ ಎನ್ನುತ್ತಾರೆ ಭಕ್ತರು. ಈ ಹಬ್ಬದ ಆರಂಭದಿAದಲೂ ದೇವಿಯ ಅಣ್ಣನಾದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಿಂದ ತೀರ್ಥ ಪ್ರಸಾದ ತರುವ ಸಂಪ್ರದಾಯವಿದ್ದು ಹಬ್ಬ ನಡೆಯುವ ದಿನ ಅಣ್ಣ ದುಃಖತಪ್ತನಾಗಿರುವ ಸನ್ನಿವೇಶ ಎಂಬAತೆ ಪಾಡಿ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮ ಬೆಟ್ಟ ಮೋಡಗಳಿಂದ ಆವೃತ್ತವಾಗಿರುತ್ತದೆ ಎಂಬ ನಂಬಿಕೆ ಇದೆ.

ಇಲ್ಲಿ ಎರಡು ವರ್ಷಕ್ಕೊಮ್ಮೆ ದೊಡ್ಡ ಹಬ್ಬ ನಡೆಯುತ್ತದೆ. ಈ ವರ್ಷ ತಾ. ೧೨ ರಂದು ಕೊಡೆಗಳನ್ನು ತರುವುದು ಹಾಗೂ ತಾ. ೧೩ ರಂದು ಕುರಂದಕಳಿ ದೊಡ್ಡ ಹಬ್ಬದ ಸಂಭ್ರಮ ಮನೆಮಾಡಿದೆ. ವಿಶೇಷ ಆಚರಣೆಗಳೊಂದಿಗೆ ನಡೆಯುವ ಉತ್ಸವ ಭಕ್ತರನ್ನು ರೋಮಾಂಚನಗೊಳಿಸುತ್ತದೆ.

-ದುಗ್ಗಳ ಸದಾನಂದ