ಕುಶಾಲನಗರ, ಏ. ೯: ಬಾಲಕಿಯೋರ್ವಳಿಗೆ ಸಾಕು ನಾಯಿಗಳು ಕಚ್ಚಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ವ್ಯಾಪಾರಿ ದರ್ಶನ್ ಎಂಬವರ ಪುತ್ರಿ ಹರ್ಲಿನ್ (೬) ತೀವ್ರ ಗಾಯಗೊಂಡ ಬಾಲಕಿ.

ಕುಶಾಲನಗರ ಅರಣ್ಯ ಇಲಾಖೆ ಕಚೇರಿ ಸಮೀಪ ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಕುಶಾಲನಗರದ ಬಡಾವಣೆಯೊಂದರ ನಿವಾಸಿ ಡೆನ್ನಿ ಎಂಬಾತ ತನ್ನ ಸಾಕು ನಾಯಿಗಳೊಂದಿಗೆ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಗಳು ಏಕಾಏಕಿ ಬಾಲಕಿಯ ಮೇಲೆ ಎರಗಿ ತೀವ್ರತರಹದ ಗಾಯಗೊಳಿಸಿದೆ. ಸ್ಥಳೀಯರು ಓಡಿಬಂದು ಮಗುವನ್ನು ರಕ್ಷಿಸದಿದ್ದಲ್ಲಿ ಭಾರಿ ಅನಾಹುತ ಉಂಟಾಗುತ್ತಿತ್ತು ಎನ್ನಲಾಗಿದೆ. ಬಾಲಕಿಯ ತಲೆ ಭಾಗ ಮತ್ತು ಬೆನ್ನು ಭಾಗ ತೀವ್ರ ರೀತಿಯ ಗಾಯಗಳು ಉಂಟಾಗಿದೆ. ಮೈಸೂರಿನಲ್ಲಿ ಬಾಲಕಿಯನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು ಚೇತರಿಸಿಕೊಳ್ಳುತ್ತಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.