ಕುಶಾಲನಗರ, ಏ. ೧೦: ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸ ಬೇಕು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಜಿ. ಕೆಂಚಪ್ಪ ಕರೆ ನೀಡಿದ್ದಾರೆ. ಮಹಾ ಆರತಿ ಬಳಗದ ಆಶ್ರಯದಲ್ಲಿ ಸ್ಥಳೀಯ ಗೌರಿ ಗಣೇಶ ದೇವಾಲಯ ಟ್ರಸ್ಟ್ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ನಡೆದ ೧೪೩ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನದಿ-ತೊರೆಗಳು ಕಲುಷಿತಗೊಳ್ಳ ದಂತೆ ಎಚ್ಚರವಹಿಸಿ ಸ್ವಚ್ಛವಾಗಿ ಹರಿಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಮಾತನಾಡಿ, ಪಟ್ಟಣ ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿ ಸೇರಿದಂತೆ ಶಾಶ್ವತ ಯೋಜನೆಗಳು ರೂಪಿಸಬೇಕು. ಆ ಮೂಲಕ ಸ್ವಚ್ಛ ಕಾವೇರಿ ಕನಸು ನನಸಾಗಲು ಸಾಧ್ಯ ಎಂದರು.
ಗೌರಿ ಗಣೇಶ ದೇವಾಲಯ ಟ್ರಸ್ಟ್ ಅಧ್ಯಕ್ಷೆ ಸುಚಿತ್ರ ತಮ್ಮಯ್ಯ, ಮಮತಾ, ಭವಾನಿ, ಹೇಮಾ, ಲಾವಣ್ಯ, ನಿತಿನ್ ಮತ್ತು ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.