ಕುಶಾಲನಗರ, ಏ. ೧೦: ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಬಿಗುಮಾನದಿಂದ ಬೀಗುವವರೇ ಇರುವ ಇಂದಿನ ಕಾಲಘಟ್ಟದಲ್ಲಿ ಇಲ್ಲೊಂದು ದಂಪತಿ ತಮ್ಮ ಮಕ್ಕಳನ್ನು, ಸರ್ಕಾರಿ ಶಾಲೆಯನ್ನು ಪ್ರೀತಿಸುವ ಹಾಗೂ ಆಧರಿಸುವ ಮೂಲಕ ಸರ್ಕಾರಿ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸಿ ಇತರರಿಗೆ ಆದರ್ಶರಾಗಿದ್ದಾರೆ.
ಈ ದಂಪತಿಯ ಹೆಸರು ಪ್ರಕಾಶ್ ಕಂಬಾರ್ ಹಾಗೂ ಡಾ. ವೀಣಾ ಕಂಬಾರ್. ಪ್ರಕಾಶ್ ಕಂಬಾರ್ ಎಂಬವರು ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಉಪನ್ಯಾಸಕರಾಗಿದ್ದು, ಇದೀಗ ಹೊನ್ನಾಳಿಗೆ ವರ್ಗವಾಗಿದ್ದಾರೆ. ಇನ್ನು ಡಾ. ವೀಣಾ ಕಂಬಾರ್ ಇವರು ಆಯುರ್ವೇದ ವೈದ್ಯರು.
ಇವರು ತಮ್ಮ ಇಬ್ಬರು ಮಕ್ಕಳನ್ನು ಒಂದರಿAದ ಹತ್ತನೇ ತರಗತಿವರೆಗೂ ಕುಶಾಲನಗರದ ಸರ್ಕಾರಿ ಶಾಲೆಯಲ್ಲಿ ಓದಿಸುವ ಮೂಲಕ ಸರ್ಕಾರಿ ಶಾಲೆಯ ಮೇಲೆ ಗೌರವಾದರ ಹೊಂದಿದವರು.
ಇವರು ಕುಶಾಲನಗರದಿಂದ ಹೊನ್ನಾಳಿಗೆ ವರ್ಗಾವಣೆಗೊಂಡು ತೆರಳುತ್ತಿರುವ ಹಿನ್ನೆಲೆ ತಮ್ಮ ಆತ್ಮೀಯ ಬಳಗದವರಿಗೆ ಶುಕ್ರವಾರ ತಮ್ಮ ಮನೆಯಂಗಳದಲ್ಲಿ ಭೋಜನ ಕೂಟವನ್ನು ಹಮ್ಮಿಕೊಂಡ ಸಂದರ್ಭ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ನೇತೃತ್ವದಲ್ಲಿ ಅವರ ಕನ್ನಡ ಶಾಲೆ ಹಾಗೂ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ನಿವೃತ್ತ ಕಂದಾಯಾಧಿಕಾರಿ ಎಂ.ಬಿ. ಬಸವರಾಜು, ವಕೀಲ ಕೆ.ಬಿ. ಮೋಹನ್, ಶಿಕ್ಷಕ ಶ್ರೀಕಾಂತ್, ರೇವಮ್ಮ, ಯಶೋಧ ಹಾಗೂ ಇತರರಿದ್ದರು.