ಚೋಳರ ಕಾಲದಲ್ಲಿ ನಿರ್ಮಾಣ ಗೊಂಡ ಮಂದಿರವೊAದು ನಂತರದ ದಿನಗಳಲ್ಲಿ ಮಠವಾಗಿ ಪರಿವರ್ತನೆ ಗೊಂಡು ಇಂದಿಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಧಾರ್ಮಿಕ ಕೇಂದ್ರ ಕೊಡ್ಲಿಪೇಟೆಯ ಕಲ್ಲುಮಠವಾಗಿದೆ.
ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ, ಸೋಮವಾರಪೇಟೆ ತಾಲೂಕಿಗೆ ಒಳಪಟ್ಟ ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದ ಕಲ್ಲುಮಠವು ಚೋಳರ ಕಾಲದ ಇತಿಹಾಸ ಹೊಂದಿದೆ. ಈ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಬೃಹತ್ ಕಲ್ಲು ಕಂಬಗಳು, ಕಲ್ಲು ಚಪ್ಪಡಿಗಳ ಮಂದಿರದಲ್ಲಿ ಉತ್ತರ ಕರ್ನಾಟಕದಿಂದ ಆಗಮಿಸಿದ ಶ್ರೀಮಹಾಂತ ಸ್ವಾಮೀಜಿಗಳು ಪೂಜಾ ಪುನಸ್ಕಾರಗಳು, ಧಾರ್ಮಿಕ ಸೇವಾ ಚಟುವಟಿಕೆಗಳನ್ನು ಕೈಗೊಂಡು ಇಲ್ಲೇ ನೆಲೆಸಿದ್ದರು.
೧೮೦೬ರಲ್ಲಿ ಕೊಡಗಿನ ರಾಜ ದೊಡ್ಡವೀರ ರಾಜೇಂದ್ರ ಅವರು ಸುಮಾರು ೮೦ ಏಕರೆ ಜಾಗವನ್ನು ಮಠಕ್ಕೆ ದಾನವಾಗಿ ನೀಡಿದರು. ಇದರಲ್ಲಿ ಸುಮಾರು ೩೦ ಏಕರೆ ಜಾಗ ಹೇಮಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದರೆ, ಉಳಿದ ೩೦ ಏಕರೆಯಲ್ಲಿ ಪ್ರಸ್ತುತ ಕೃಷಿ ಕಾರ್ಯಗಳು ನಡೆಯುತ್ತಿದ್ದು, ೨೦ ಏಕರೆ ಪ್ರದೇಶವು ಜಾನುವಾರುಗಳು ಮೇಯುವ ಸ್ಥಳವಾಗಿದೆ.
ಶ್ರೀಮಹಾಂತ ಸ್ವಾಮೀಜಿಗಳ ನಂತರ ಏಳೆಂಟು ಸ್ವಾಮೀಜಿಗಳು ಶ್ರೀಮಠದಲ್ಲಿ ಧಾರ್ಮಿಕ ಸೇವೆಗಳನ್ನು ಸಲ್ಲಿಸಿದ್ದಾರೆ. ಪ್ರಮುಖವಾಗಿ ಶ್ರೀ ಸೋಮಶೇಖರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸೋಮಪ್ಪ ಸ್ವಾಮೀಜಿ, ಸೋಮಶೇಖರ ಸ್ವಾಮೀಜಿ, ನಂಜುAಡಸ್ವಾಮಿಗಳು ಈ ಮಠವನ್ನು ಮುನ್ನಡೆಸಿದ್ದು, ಪ್ರಸ್ತುತ ಕೊಡಗಿನವರೇ ಆದ ಮಡಿಕೇರಿ ಮದೆನಾಡು ಸಮೀಪದ ಶ್ರೀ ಮಹಾಂತ ಸ್ವಾಮೀಜಿಗಳು ಶ್ರೀಮಠದ ಉಸ್ತುವಾರಿ ವಹಿಸಿದ್ದಾರೆ.
ಮದೆನಾಡು ಸಮೀಪದ ಓಣಿಪುರ ಮಠವು ಶ್ರೀಮಹಾಂತ ಸ್ವಾಮೀಜಿಗಳ ಪೂರ್ವಾಶ್ರಮವಾಗಿದ್ದು, ಇವರ ಪೂರ್ವಜರು ರಾಜರಿಗೆ ಗುರುಗಳಾಗಿದ್ದರು. ಈ ಕಾರಣಕ್ಕಾಗಿ ಮದೆನಾಡು ಬಳಿಯಲ್ಲಿ ಸುಮಾರು ೫೦ ಏಕರೆಯಷ್ಟು ಜಾಗವನ್ನು ರಾಜರು ಶ್ರೀಮಠಕ್ಕೆ ದಾನವಾಗಿ ನೀಡಿದ್ದಾರೆ.
ಕಲ್ಲುಮಠವು ಕೊಡ್ಲಿಪೇಟೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿದ್ದು, ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಶ್ರೀಮಠವನ್ನು ಕಳೆದ ೨೦೧೯-೨೦ರ ಸಾಲಿನಲ್ಲಿ ಅಂದಾಜು ೫೦ ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ೩೦ ಲಕ್ಷ ವೆಚ್ಚದಲ್ಲಿ ನೂತನವಾಗಿ ದಾಸೋಹ ಭವನ ನಿರ್ಮಿಸಲಾಗಿದೆ.
ಚೋಳರ ಕಾಲದಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪವನ್ನು ಹಾಗೆಯೇ ಉಳಿಸಿಕೊಂಡು, ಮಠದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಜೀರ್ಣೋದ್ದಾರಗೊಳಿಸಿರುವುದು ವಿಶೇಷ. ಬೃಹತ್ ಕಲ್ಲಿನ ಕಂಬಗಳು, ಅದರಲ್ಲಿನ ಕೆತ್ತನೆ, ದೇವರುಗಳ ಮೂರ್ತಿ, ಕಲ್ಲುಗಳ ಚಪ್ಪಡಿಗಳನ್ನು ಹಾಗೆಯೇ ಉಳಿಸಿಕೊಂಡು, ಕಲಾ ಕೌಶಲ್ಯಕ್ಕೆ ಧಕ್ಕೆಯಾಗದಂತೆ ಮಠವನ್ನು ಜೀರ್ಣೋದ್ಧಾರಗೊಳಿಸಲಾಗಿದೆ.
ಇನ್ನು ಮಠದ ಆವರಣದಲ್ಲಿ ದಾಸೋಹ ಭವನ ನಿರ್ಮಾಣಗೊಂಡಿದ್ದು, ಭಕ್ತಾದಿಗಳ ಸೇವೆಗೆ ಸಿದ್ಧವಾಗಿದೆ. ವಸತಿ ಸೌಕರ್ಯಕ್ಕಾಗಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಸರ್ಕಾರದ ಅನುದಾನದೊಂದಿಗೆ ಸ್ವಾಮೀಜಿಗಳ ಶ್ರಮ, ಭಕ್ತಾದಿಗಳ ದೇಣಿಗೆ ಸೇರಿದಂತೆ ಮಠಕ್ಕೆ ಸೇರಿದ ಆಸ್ತಿಯಲ್ಲಿ ಕೈಗೊಂಡಿರುವ ಕೃಷಿಯಿಂದ ಬಂದ ಹಣವನ್ನು ಮಠದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ.
ಮಠಕ್ಕೆ ಒಳಪಟ್ಟಂತೆ ೩೦ ಏಕರೆಯಷ್ಟು ಆಸ್ತಿಯಲ್ಲಿ ಕೃಷಿ ಕಾರ್ಯ ಕೈಗೊಳ್ಳಲಾಗಿದೆ. ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಶ್ರೀಮಹಾಂತ ಸ್ವಾಮೀಜಿಗಳು, ಕಾಫಿ, ಕರಿಮೆಣಸು, ಜೋಳ, ಶುಂಠಿ ಸೇರಿದಂತೆ ಇನ್ನಿತರ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಧಾರ್ಮಿಕ ಕಾರ್ಯಗಳು: ಕಲ್ಲುಮಠವು ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಈ ಭಾಗದಲ್ಲಿ ಹೆಸರು ಮಾಡಿದೆ. ಶ್ರೀಮಠದಲ್ಲಿ ಬಸವ ಜಯಂತಿ, ಧಾರ್ಮಿಕ ಸಂದೇಶಗಳ ಮೂಲಕ ಸಾಮಾಜಿಕ ಜಾಗೃತಿ, ಪೌರಾಣಿಕ ಹಾಗೂ ಧಾರ್ಮಿಕತೆಯ ನಾಟಕಗಳ ಪ್ರದರ್ಶನ, ಶ್ರೀಶಿವ ಕುಮಾರ ಸ್ವಾಮೀಜಿಗಳ ನೆನಪಿಗೋಸ್ಕರ ದಾಸೋಹ ದಿನಾಚರಣೆ, ಸಂಸ್ಕೃತ ಪಾಠಶಾಲೆಯ ಮೂಲಕ ಪ್ರಾಚೀನ ಪರಂಪರೆಯ ಬಗ್ಗೆ ಯುವ ಜನಾಂಗದಲ್ಲಿ ಅರಿವು ಮೂಡಿಸುವ ಕಾರ್ಯ ಶ್ರೀಮಠದಿಂದ ಆಗುತ್ತಿದೆ.
ಧಾರ್ಮಿಕ ಸಂಸ್ಕಾರದೊAದಿಗೆ ಯುವ ಜನಾಂಗಕ್ಕೆ ವ್ಯಸನಮುಕ್ತ ಜೀವನ, ಸುಗಮ ಜೀವನದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಹಲವಷ್ಟು ಭಕ್ತಾದಿಗಳು ತಮ್ಮಲ್ಲಿನ ಸಮಸ್ಯೆಗಳಿಗೆ ಶ್ರೀಮಠದಿಂದ ಪರಿಹಾರ ಕಂಡುಕೊAಡಿದ್ದಾರೆ. ಶ್ರೀಮಹಾಂತ ಸ್ವಾಮೀಜಿಗಳು ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ, ಭಕ್ತರ ಜೀವನವನ್ನು ಉನ್ನತೀಕರಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿರುವುದು ವಿಶೇಷ.
ಮಠಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಪ್ರತಿದಿನ ಅನ್ನದಾಸೋಹದ ವ್ಯವಸ್ಥೆಯಿದೆ. ಉಳಿದುಕೊಳ್ಳಲು ವಸತಿಯಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ತಮ್ಮಲ್ಲಿನ ಸಮಸ್ಯೆಗಳಿಗೆ ಸ್ವಾಮೀಜಿಗಳಿಂದ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಜ್ಞಾನದಾಸೋಹ: ಶ್ರೀಮಠದ ಆವರಣದಲ್ಲಿದ್ದ ಸಣ್ಣ ಕಟ್ಟಡವೊಂದರಲ್ಲಿ ೨೦೦೨-೦೩ರಲ್ಲಿ ಶ್ರೀ ನಂಜುAಡಸ್ವಾಮಿ ವಿದ್ಯಾಸಂಸ್ಥೆ-ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದು, ಇಂದು ಈ ವಿದ್ಯಾಸಂಸ್ಥೆ ಬೃಹತ್ತಾಗಿ ಬೆಳೆದಿದೆ.
ಕಳೆದ ೨೦೦೬ರಲ್ಲಿ ಸುಮಾರು ೧೦ ಏಕರೆಯಷ್ಟು ಪ್ರದೇಶದಲ್ಲಿ ವಿದ್ಯಾಸಂಸ್ಥೆಯನ್ನು ನಿರ್ಮಾಣಗೊಳಿಸಲಾಗಿದ್ದು, ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆ ಮೂಲಕ ಅನ್ನದಾಸೋಹದೊಂದಿಗೆ ಜ್ಞಾನದಾಸೋಹ ದಲ್ಲೂ ಕಲ್ಲುಮಠ ಮುಂಚೂಣಿಯಲ್ಲಿದೆ.
ಕಲ್ಲುಮಠವು ಕೊಡ್ಲಿಪೇಟೆ ಪಟ್ಟಣದಿಂದ ಒಂದೂವರೆ ಕಿ.ಮೀ. ಅಂತರದಲ್ಲಿದೆ. ತಾಲೂಕು ಕೇಂದ್ರ ಸೋಮವಾರಪೇಟೆಯಿಂದ ೩೨ ಕಿ.ಮೀ., ಮಡಿಕೇರಿಯಿಂದ ೭೨, ನೆರೆಯ ಹಾಸನ ಜಿಲ್ಲಾ ಕೇಂದ್ರದಿAದ ೫೦, ಅರಕಲಗೂಡಿನಿಂದ ೨೫ ಕಿ.ಮೀ. ಅಂತರದಲ್ಲಿದೆ.
ಕೊಡ್ಲಿಪೇಟೆಯಿAದ ಮಠಕ್ಕೆ ಸಂಪರ್ಕಿಸುವ ರಸ್ತೆ ಸುಸ್ಥಿತಿಯಲ್ಲಿದೆ. ದೊಡ್ಡಕೊಡ್ಲಿ ಮುಖ್ಯರಸ್ತೆಯಿಂದ ಮಠದ ಮುಂಭಾಗದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿ ರುವ ಶ್ರೀಮಠವು, ಶ್ರೀಮಹಾಂತ ಸ್ವಾಮೀಜಿಗಳ ಉಸ್ತುವಾರಿಯಲ್ಲಿ ಗೋಪಾಲನೆಯೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವಾನಿರತವಾಗಿದೆ.
- ವಿಜಯ್ ಹಾನಗಲ್,
ಸೋಮವಾರಪೇಟೆ.