ಕುಶಾಲನಗರ, ಏ. ೭: ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಬೃಹತ್ ಜಾಗತಿಕ ಧಾರ್ಮಿಕ ಸಂಕಲ್ಪ ಕೋಟಿಗೀತಾ ಲೇಖನಯಜ್ಞ ಅಭಿಯಾನಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ಕುಶಾಲನಗರದ ಶ್ರೀ ವಾಸವಿ ಕನ್ಯಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಠದ ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಭಿಯಾನದ ಕೊಡಗು ಜಿಲ್ಲಾ ಗೌರವಾಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್, ಜಿಲ್ಲಾ ಗೌರವ ಸಲಹೆಗಾರರಾಗಿ ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಕೊಡಗು ಜಿಲ್ಲಾ ಕೋಟಿಗೀತಾ ಲೇಖನಯಜ್ಞ ಅಭಿಯಾನದ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಕೆ. ಸತೀಶ್ ಅವರು ಜಿಲ್ಲಾ ತಾಲೂಕು ಮತ್ತು ಗ್ರಾಮವಾರು ಸಂಯೋಜಕರನ್ನು ಘೋಷಿಸಿದರು. ಕೋಟಿಗೀತಾ ಲೇಖನಯಜ್ಞದ ಕೊಡಗು ಜಿಲ್ಲಾ ಮಹಿಳಾ ಘಟಕದ ಸಂಯೋಜಕಿಯಾಗಿ ಅಪೇಕ್ಷಿಸುವವರು ಕುಶಾಲನಗರದ ರಮಾ ವಿಜಯೇಂದ್ರ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಗೌರವಾಧ್ಯಕ್ಷರಾದ ಸತೀಶ್ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಉಡುಪಿ ಮಠದ ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯ, ಭಗವದ್ಗೀತೆಯನ್ನು ಸಂಪೂರ್ಣವಾಗಿ ಬರೆದು ೨೦೨೪ ಜನವರಿ ೧೮ ರಿಂದ ೨೦೨೬ ಜನವರಿ ೧೭ರ ವರೆಗಿನ ಶ್ರೀ ಪುತ್ತಿಗೆ ಶ್ರೀಗಳ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಭಕ್ತಾದಿಗಳು ಬರೆದ ಪುಸ್ತಕವನ್ನು ಯಾವಾಗ ಬೇಕಾದರೂ ಶ್ರೀಗಳ ಮೂಲಕ ಉಡುಪಿ ಶ್ರೀ ಕೃಷ್ಣನಿಗೆ ಸಮರ್ಪಿಸಬಹುದಾಗಿದೆ ಎಂದರು.
ಕೋಟಿಗೀತಾ ಯಜ್ಞದ ಸಂಪೂರ್ಣ ಮಾಹಿತಿ ನೀಡಿದ ವಿದ್ವಾನ್ ರಮಣಾಚಾರ್, ಆತ್ಮೋದ್ಧಾರ ಮತ್ತು ಲೋಕಕಲ್ಯಾಣಾರ್ಥದ ಜೀವಮಾನದಲ್ಲಿ ಒಂದೇ ಒಂದು ಬಾರಿ ಲಭಿಸಬಹುದಾದ ಅತ್ಯಪೂರ್ವವಾದ ಈ ಯಜ್ಞದಲ್ಲಿ ಜಾತಿ, ಮತ, ಧರ್ಮ,ಲಿಂಗ, ವಯೋ ಬೇಧಗಳಿಲ್ಲದೆ ಸರ್ವರೂ ದೀಕ್ಷ ಬದ್ಧರಾಗಬಹುದಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ವಿದ್ವಾನ್ ರಮಣ ಆಚಾರ್ (೮೭೯೨೨೫೮೯೪೬),ಎಸ್ ಕೆ ಸತೀಶ್ (೯೮೪೫೬೯೯೫೦೮), ರಮಾ ವಿಜಯೇಂದ್ರ (೯೮೮೬೪೪೮೨೨೬), ಬಿ ಆರ್ ನಾಗೇಂದ್ರ ಪ್ರಸಾದ್ (೯೪೪೮೦೭೪೫೨೮), ಮಧುಸೂದನ್ (೮೪೯೫೦೦೬೮೫೭) ಅವರುಗಳನ್ನು ಸಂಪರ್ಕಿಸುವAತೆ ಗೌರವಾಧ್ಯಕ್ಷ ಸತೀಶ್ ಕೋರಿದ್ದಾರೆ.
ಕುಶಾಲನಗರ ತಾಲೂಕು ಸಂಚಾಲಕರಾಗಿ ಬಿ.ಆರ್. ನಾಗೇಂದ್ರ ಪ್ರಸಾದ್, ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ದಾಮೋದರ್, ವೀರಾಜಪೇಟೆ ತಾಲೂಕು ಸಂಚಾಲಕರಾಗಿ ಮಂಜುನಾಥ್ ಮಲ್ಯ, ಪೊನ್ನಂಪೆಟ್ಟಿ ತಾಲೂಕು ಸಂಚಾಲಕರಾಗಿ ಬೋಪಣ್ಣ, ಮಡಿಕೇರಿ ತಾಲೂಕು ಸಂಚಾಲಕರಾಗಿ ರಂಜಿತ್ ಅವರುಗಳನ್ನು ನೇಮಿಸಲಾಯಿತು.