ಮಡಿಕೇರಿ, ಏ. ೬: ನಗರದ ಶ್ರೀ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ನಾಗದೇವರಿಗೆ ತಂಬೀಲ ಸಮರ್ಪಣೆ, ಕಲಶಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಿತು. ಸಂಜೆ ಧ್ವಜಾರೋಹಣವನ್ನು ಡಾ. ಎಂ.ಜಿ. ಪಾಟ್ಕರ್ ಅವರು ನೆರವೇರಿಸಿದರು.
ದೇವಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ಯಾಲರಿಯನ್ನು ದಾನಿ ದೇಲಂಪಾಡಿ ಗಣೇಶ್ ಮರಗೋಡು ಉದ್ಘಾಟಿಸಿದರು. ಮುತ್ತಪ್ಪ ದೇವರ ಮಲೆ ಇಳಿಸುವುದು, ಮುತ್ತಪ್ಪ ದೇವರ ವೆಳ್ಳಾಟಂ, ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ ಮತ್ತು ಭಕ್ತಾದಿಗಳಿಂದ ಹರಕೆ ಕೋಲಗಳು ನಡೆದವು.
ಇಂದು ಮೆರವಣಿಗೆ: ಜಾತ್ರಾ ಉತ್ಸವದ ಪ್ರಯುಕ್ತ ತಾ. ೭ ರಂದು (ಇಂದು) ಸಂಜೆ ೫.೩೦ ಗಂಟೆಗೆ ಗಾಂಧಿ ಮೈದಾನದಿಂದ ಕಲಾ ತಂಡಗಳು, ಚಂಡೆ ವಾದ್ಯಗಳೊಂದಿಗೆ ವಿದ್ಯುತ್ ಅಲಂಕೃತ ಮಂಟಪವನ್ನು ಒಳಗೊಂಡು ಕಲಶ ಹಾಗೂ ತಾಲಾಪೊಲಿ ಮೆರವಣಿಗೆ ನಡೆಯಲಿದೆ.
ರಾತ್ರಿ ೭ ಗಂಟೆಗೆ ವಿಷ್ಣುಮೂರ್ತಿ ಮೇಲೇರಿಕೆ ಅಗ್ನಿಸ್ಪರ್ಶ, ೮.೩೦ ರಿಂದ ಪ್ರಸಾದ ವಿನಿಯೋಗ, ರಾತ್ರಿ ೯.೩೦ಕ್ಕೆ ಶ್ರೀ ಪೋದಿ ವೆಳ್ಳಾಟಂ, ೧೦.೩೦ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ೧೨ ಗಂಟೆಗೆ ಶಿವಭೂತ ತೆರೆ, ೧ ಗಂಟೆಗೆ ಗುಳಿಗ ದೇವರ ತೆರೆ, ೨ ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, ೨.೩೦ ಗಂಟೆಗೆ ಕುಟ್ಟಿಚಾತನ್ ದೇವರ ತೆರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.