ಮಡಿಕೇರಿ, ಏ. ೬: ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಕದನಕ್ಕೆ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಖಚಿತವಾಗುವದರೊಂದಿಗೆ ಈ ಪಕ್ಷ ಇದೀಗ ಪೂರ್ಣ ಪ್ರಮಾಣದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ.
ವೀರಾಜಪೇಟೆ ಕ್ಷೇತ್ರಕ್ಕೆ ವಕೀಲ ಎ.ಎಸ್. ಪೊನ್ನಣ್ಣ ಅವರು ಕಾಂಗ್ರೆಸ್ ಪ್ರಕಟಿಸಿದ ಮೊದಲ ೧೨೪ ಅಭ್ಯರ್ಥಿಗಳ ಪಟ್ಟಿಯಲ್ಲೇ ಖಚಿತವಾಗಿದ್ದರು. ಇದೀಗ ಕಾಂಗ್ರೆಸ್ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಡಾ|| ಮಂಥರ್ಗೌಡ ಅವರು ಅಧಿಕೃತಗೊಂಡಿದ್ದಾರೆ. ಈ ಮೂಲಕ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಪ್ರಶ್ನೆಗೆ ಉತ್ತರ ದೊರೆತಂತಾಗಿದೆ. ಇಲ್ಲಿ ನಾಲ್ಕೆöÊದು ಮಂದಿ ಆಕಾಂಕ್ಷಿಗಳಿದ್ದರೂ ಇದೀಗ ಪಕ್ಷ ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಒಂದಷ್ಟು ಸಂಚಲನ ಮೂಡಿಸಿದ್ದ ಡಾ|| ಮಂಥರ್ಗೌಡ ಅವರಿಗೇ ಮತ್ತೆ ಅವಕಾಶ ನೀಡಿದೆ. ಎರಡು ಕ್ಷೇತ್ರಗಳ ‘ಕೈ’ ಅಭ್ಯರ್ಥಿಗಳು ಅಧಿಕೃತವಾಗಿದ್ದು, ಕಾಂಗ್ರೆಸ್ ಪ್ರಚಾರ ಇದೀಗ ಬಿರುಸು ಕಾಣಲಾರಂಭಿಸಿದೆ.
ಬಿಜೆಪಿಯಲ್ಲೇ ಕೌತುಕ
ಕಾಂಗ್ರೆಸ್ಗೆ ಬಹುತೇಕ ನೇರ ಎದುರಾಳಿಯಾಗಲಿರುವ ಭಾರತೀಯ ಜನತಾ ಪಕ್ಷದಲ್ಲೇ ಇದೀಗ ಕೌತುಕ ಹೆಚ್ಚಾಗಿದೆ. ಈ ಕುತೂಹಲ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರವಲ್ಲ ಕಾಂಗ್ರೆಸ್ ಸೇರಿದಂತೆ ಜನತೆಯೂ ಈ ಬಗ್ಗೆ ಕಾತರದಿಂದಿದ್ದಾರೆ.
ರಾಜ್ಯದ ಯಾವುದೇ ಕ್ಷೇತ್ರಕ್ಕೂ ಬಿಜೆಪಿ ಯಾರ ಹೆಸರನ್ನೂ ಪ್ರಕಟಿಸಿಲ್ಲ. ಎಲ್ಲವೂ ದೆಹಲಿ ಮಟ್ಟದ ತೀರ್ಮಾನವಾಗಲಿರುವುದರಿಂದ ಸ್ಥಳೀಯವಾಗಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರಲ್ಲಿ ಇನ್ನೂ ಗೊಂದಲ ಬಗೆಹರಿದಿಲ್ಲ. ಕೇವಲ ಚರ್ಚೆಗಳು ಮಾತ್ರ ಸದ್ಯದ ಬೆಳವಣಿಗೆಯಾಗಿದೆ.
ಹಾಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳೇ ಮುಂದುವರಿಯಲಿದ್ದಾರೆ ಎಂಬ ಮಾತು ದಟ್ಟವಾಗಿದೆಯಾದರೂ ಇದನ್ನು ಒಪ್ಪಲು ಪಕ್ಷದ ಹಲವಾರು ಮಂದಿಯೇ ಸಿದ್ಧರಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬದಲಾವಣೆ ಖಚಿತ ಎಂಬ ನಿರೀಕ್ಷೆ - ಕುತೂಹಲ ಇಂತಹ ಹಲವರದ್ದಾಗಿದೆ.
ಸದ್ಯದ ಮಟ್ಟಿಗೆ ಹಲವರ ಹೆಸರುಗಳು ದೆಹಲಿ ಮಟ್ಟಕ್ಕೆ ಹೋಗಿದ್ದು, ಇವರಲ್ಲಿ ಅಭ್ಯರ್ಥಿಗಳ ತೀರ್ಮಾನವಾಗಲಿದೆ ಎನ್ನಲಾಗುತ್ತಿದೆ. ಇಬ್ಬರು ಹಾಲಿ ಶಾಸಕರುಗಳ ಹೆಸರಿನೊಂದಿಗೆ ಮಡಿಕೇರಿ ಕ್ಷೇತ್ರದಿಂದ ಬಿ.ಬಿ. ಭಾರತೀಶ್, ದೀಪಕ್ ಹಾಗೂ ಡಾ|| ಬಿ.ಸಿ. ನವೀನ್ಕುಮಾರ್ ಅವರ ಹೆಸರು ಈ ಪಟ್ಟಿಯಲ್ಲಿವೆ.
ಇನ್ನೂ ವೀರಾಜಪೇಟೆ ಕ್ಷೇತ್ರದಿಂದ ರವಿಕುಶಾಲಪ್ಪ, ರಾಬಿನ್ದೇವಯ್ಯ, ರೀನಾ ಪ್ರಕಾಶ್, ನೆಲ್ಲೀರ ಚಲನ್ ಅವರುಗಳ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಹಾಲಿಗಳೇ ಅಥವಾ ಹೊಸಮುಖವೇ ಎಂಬದೂ ಇನ್ನೂ ಯಕ್ಷ ಪ್ರಶ್ನೆಯಾಗಿದೆ.