ಸೋಮವಾರಪೇಟೆ, ಏ. ೬: ಕರುವಿದ್ದಾಗ ಹಾಕಿದ ಮೂಗುದಾರವೀಗ ಕೊರೆಯ ಲಾರಂಭಿಸಿದ್ದು, ಯಡವನಾಡಿನ ಅರಣ್ಯ ಪ್ರದೇಶದ ರಸ್ತೆಯಲ್ಲಿ ಗೋವೊಂದು ಮೂಕ ರೋಧನೆ ಅನುಭವಿಸುತ್ತಿದೆ.
ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿರುವ ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹತ್ತಾರು ಗೋವುಗಳನ್ನು ಮೇಯಲು ಬಿಡಲಾಗುತ್ತಿದ್ದು, ಇದರಲ್ಲಿ ಒಂದು ಗೋವು ಪ್ರತಿದಿನ ನರಕ ಯಾತನೆ ಅನುಭವಿಸುತ್ತಿದೆ.
ಎಳೆಯ ವಯಸ್ಸಿನಲ್ಲಿ ಈ ಗೋವಿಗೆ ಮೂಗುದಾರ ಹಾಕಿರುವ ಗೋವಿನ ಮಾಲೀಕರು ನಂತರ ಇದರ ಬಗ್ಗೆ ಗಮನ ಹರಿಸದ ಹಿನ್ನೆಲೆ ಅಂದಿನ ಸಣ್ಣ ದಾರ ಇದೀಗ ಗೋವಿಗೆ ನರಕಯಾತನೆ ನೀಡುತ್ತಿದೆ. ಬೆಳವಣಿಗೆಯಾಗಿರುವ ಗೋವಿನ ಮೂಗು ಕೊರೆಯ ಲಾರಂಭಿಸಿದ್ದು ರಕ್ತಸ್ರಾವವಾ ಗುತ್ತಿದೆ. ನೊಣಗಳು ಗುಯ್ ಗುಡುತ್ತಿರುವುದರಿಂದ ಗೋವು ಮೂಕರೋಧನೆ ಅನುಭವಿಸುತ್ತಿದೆ.
ಇದರೊಂದಿಗೆ ಮೇವು ತಿನ್ನಲೂ ಸಹ ಸಾಧ್ಯವಾಗದೇ ನೋವು ಅನುಭವಿಸುತ್ತಿದೆ. ಗೋವಿನ ಮಾಲೀಕರಂತೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕನಿಷ್ಟ ಪಕ್ಷ ಗೋ ಪ್ರೇಮಿಗಳು, ಪಶು ವೈದ್ಯಕೀಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ, ಮೂಗುದಾರದಿಂದ ಗೋವಿಗೆ ಮುಕ್ತಿ ನೀಡುವ ಮೂಲಕ ಮೂಕ ಪ್ರಾಣಿಯನ್ನು ಮೂಕ ರೋಧನದಿಂದ ಪಾರು ಮಾಡಬೇಕಾಗಿದೆ.