ವೀರಾಜಪೇಟೆ, ಏ. ೫: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದು, ತನಿಖೆಯೂ ಪ್ರಗತಿಯಲ್ಲಿದೆ. ಇಷ್ಟಾದರು ಆಸ್ಪತ್ರೆ ಕಾರ್ಯವೈಖರಿ ಬದಲಾಗದ ಹಿನ್ನೆಲೆ ಕೂಡಲೇ ಆರೋಪ ಹೊತ್ತಿರುವ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿರುವ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಕ್ರಮಕೈಗೊಳ್ಳದಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊAದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯೆದ್ಯಾಧಿಕಾರಿಯ ಅಸಮರ್ಪಕ ಕಾರ್ಯವೈಖರಿ ಹಾಗೂ ಹಣ ದುರ್ಬಳಕೆಯ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಅಧಿಕಾರಿಗಳು ಆಗಮಿಸಿ ವಿಚಾರಣೆ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೈದ್ಯಾಧಿಕಾರಿ ತಾನು ಸೇರಿದಂತೆ ಕೆಲವರ ಮೇಲೆ ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬAಧ ವಿಚಾರಣೆಗೂ ಹಾಜರಾಗಿದ್ದೇನೆ ಎಂದರು.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೀಠೋಪಕರಣಗಳನ್ನು ಖರೀದಿಸಿ ನಿರುಪಯುಕ್ತ ಎಂದು ಕೇವಲ ರೂ. ೧೭ ಸಾವಿರಕ್ಕೆ ಮಾರಾಟ ಮಾಡಲಾಗಿದೆ. ವಾಹನ, ಆ್ಯಂಬ್ಯುಲೆನ್ಸ್, ಜನರೇಟರ್, ಡಿಸೇಲ್ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆ. ಈ ವಿಚಾರವನ್ನು ಲೋಕಾಯುಕ್ತದ ಗಮನಕ್ಕೆ ತರಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಏಕಪಕ್ಷೀಯ ನಡೆ ಅನುಸರಿಸಲಾಗುತ್ತಿದೆ. ತಮಗೆ ಬೇಕಾದವರಿಗೆ ಬೇಕಾಗಿರುವ ವಿಭಾಗಕ್ಕೆ ನಿಯೋಜನೆ, ನಿಯಮ ಪಾಲಿಸದೆ ರಜೆ ನೀಡಲಾಗುತ್ತಿದೆ. ಆಸ್ಪತ್ರೆಯ ಕ್ಯಾಂಟಿನ್ ಗುತ್ತಿಗೆಯನ್ನು ಅನರ್ಹರಿಗೆ ನೀಡಿದ್ದು, ಗುತ್ತಿಗೆ ಪಡೆದವರು ಉಪಗುತ್ತಿಗೆ ನೀಡಿದ್ದಾರೆ. ಮಾಂಸಾಹಾರ, ‘ಸ್ಮೋಕಿಂಗ್ ಝೋನ್’ ಕೂಡ ನಿರ್ಮಾಣ ಮಾಡಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎನ್.ಪಿ. ಅನಿಲ್ ಮಾತನಾಡಿ, ೨೪೦ ಹಾಸಿಗೆ ಸಾಮಾರ್ಥ್ಯದ ಆಸ್ಪತ್ರೆ ಶೀತ, ಜ್ವರದಂತ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸೀಮಿತವಾಗಿದೆ. ಸಂಜೆ ೬ ಗಂಟೆಯ ನಂತರ ಬಂದ ರೋಗಿಗಳನ್ನು ನೇರವಾಗಿ ಮಡಿಕೇರಿಗೆ ರವಾನಿಸಲಾಗುತ್ತಿದೆ. ಆಡಳಿತಾಧಿಕಾರಿ ವಾರಕ್ಕೆ ಮೂರು ದಿನ ಮಾತ್ರ ಕರ್ತವ್ಯ ನಿರ್ವಹಿಸುವುದರಿಂದ ಇತರ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಯಾವುದೇ ಹಿಡಿತ ಇಲ್ಲ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಪ್ರಮುಖರಾದ ವರ್ಗಿಸ್ ಲೆನಿನ್, ಮಂಡೇಟಿರ ಪೊನ್ನಪ್ಪ, ತಬ್ರಿಸ್, ವಿವಾನ್ ಮತ್ಯಾಸ್ ಉಪಸ್ಥಿತರಿದ್ದರು.