ಪೊನ್ನಂಪೇಟೆ, ಏ. ೬: ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರು-ಕಾರ್ಮಾಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾಲಭೈರವೇಶ್ವರ ದೇವರ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ತಾ. ೩ ರಿಂದ ತಾ. ೫ ರವರೆಗೆ ನಡೆದ ವಾರ್ಷಿಕ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತಾ. ೩ ರಂದು ಗಣಪತಿ ಹೋಮದೊಂದಿಗೆ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ಕಂದಳ ತರುವ ಕಾರ್ಯಕ್ರಮದ ನಂತರ ರಾತ್ರಿ ೯ ಗಂಟೆಗೆ ಮಹಾಪೂಜೆ ನೆರವೇರಿತು. ತಾ. ೪ ರಂದು ಬೆಳಿಗ್ಗೆ ಗಣಪತಿ ಹೋಮ, ರುಧ್ರಾಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ದೇವಸ್ಥಾನದಿಂದ ಲಕ್ಷ್ಮಣತೀರ್ಥ ನದಿವರೆಗೆ ಮೆರವಣಿಗೆ ಮೂಲಕ ತೆರಳಿ ದೇವರ ಸ್ನಾನ ನೆರವೇರಿಸಲಾಯಿತು. ಸಂಜೆ ಕೊಂಡ ಸ್ನಾನ, ಅಲಂಕಾರ ಪೂಜೆ ಮಹಾಮಂಗಳಾರತಿ ನಡೆಯಿತು.

ತಾ. ೫ ರಂದು ಬೆಳಿಗ್ಗೆ ಶುದ್ಧ ಕಲಶ ಮಹಾಪೂಜೆ, ಭಂಡಾರ ಕಟ್ಟುವುದು ಬಳಿಕ ವಾರ್ಷಿಕ ಮಹಾಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮೇಚಂಡ ವಾಸು ಸೋಮಯ್ಯ, ಸುಮಾರು ೨೦೦ ರಿಂದ ೨೫೦ ವರ್ಷಗಳ ಇತಿಹಾಸವಿರುವ ಕಾಲಭೈರವ ದೇವಸ್ಥಾನದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ವಾರ್ಷಿಕ ಮಹೋತ್ಸವ ನಡೆಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಗಣಪತಿ ಗುಡಿ, ಗೋಪಾಲ, ಪಾರ್ವತಿ, ಮುನೇಶ್ವರ, ಸುಬ್ರಹ್ಮಣ್ಯ, ನಾಗದೇವತೆ, ದುರ್ಗಾಪರಮೇಶ್ವರಿ, ಬೇಟೆಗಾರ ಅಯ್ಯಪ್ಪ, ಸಿದ್ಧಪುರುಷ, ವನಶಾಸ್ತಾವು ದೇವರ ಗುಡಿಗಳಿದ್ದು, ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಇಷ್ಟಾರ್ಥ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಮಾತನಾಡಿ, ನಿಟ್ಟೂರು ಗ್ರಾಮ ಪಂಚಾಯಿತಿ ಕಾಲಭೈರವ ದೇವಸ್ಥಾನದ ವಾರ್ಷಿಕ ಪೂಜೋತ್ಸವದಲ್ಲಿ ಎಲ್ಲಾ ಜನಾಂಗದವರು ಪಾಲ್ಗೊಳ್ಳುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಈ ಸಂದರ್ಭ ದೇವಸ್ಥಾನದ ಕಾರ್ಯದರ್ಶಿ ಕೊಟ್ಟಂಗಡ ಮಂಜುನಾಥ್ ಹಾಗೂ ಪದಾಧಿಕಾರಿಗಳು ಇದ್ದರು.

ದೇವಸ್ಥಾನ ಅರ್ಚಕ ಸುರೇಶ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.