ಮಡಿಕೇರಿ, ಏ. ೫: ಜಿಲ್ಲಾ ಕಾನೂನು ಪ್ರಾಧಿಕಾರ, ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಶಾಂತಿ ಜಿ. ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಧ್ಯಕ್ಷರು ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ, ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶಮ್ಮಿ ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ಶುಚಿತ್ವಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೇವಕ್ಕಿ ಅವರ ಕಾರ್ಯದಕ್ಷತೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಜನರಿಗೆ ಕಾನೂನು ಅರಿವು, ಮಾರ್ಗದರ್ಶನ, ಪ್ರೋತ್ಸಾಹವನ್ನು ನೀಡುತ್ತಿರುವ ಹಿರಿಯ ಮಹಿಳಾ ವಕೀಲೆ ಮೀನಾ ಕುಮಾರಿ ಮತ್ತು ಕವಿ ವಿಭೂಷಣ ಪ್ರಶಸ್ತಿಗೆ ಭಾಜನರಾದ ಗ್ರಂಥಪಾಲಕಿ ಜಯಂತಿ ರೈ ಅವರನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.

ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ವಕೀಲರಿಗೂ ಮತ್ತು ಮಹಿಳಾ ಸಿಬ್ಬಂದಿಯವರಿಗೂ ವಿವಿಧ ಆಟೋಟ ಸ್ಪರ್ಧೆ, ನೃತ್ಯ, ಹಾಡುಗಾರಿಕೆ, ರಂಗೋಲಿ, ಫ್ಯಾಷನ್ ಶೋ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಜಯಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಜೋಸೆಫ್, ನೌಕರರ ಸಂಘದ ಮಾಜಿ ಅಧ್ಯಕ್ಷೆ ರೋಹಿಣಿ, ವಕೀಲರ ಸಂಘದ ಮಹಿಳಾ ನಿರ್ದೇಶಕರಾದ ಲತಾಕುಮಾರಿ, ದಿವ್ಯ, ವಕೀಲರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಕೃಷ್ಣವೇಣಿ ಪ್ರಾರ್ಥಿಸಿದರು. ಮೀನಾಕುಮಾರಿ ಸ್ವಾಗತಿಸಿ, ವಂದಿಸಿದರು. ಮೀನ ನಿರೂಪಿಸಿದರು.