ಮಡಿಕೇರಿ, ಏ. ೫: ಹೊದ್ದೂರು ಪಾಲೆಮಾಡುವಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಮೂಲಕ ನಿರ್ಮಾಣಗೊಳ್ಳಲಿರುವ ಕ್ರಿಕೆಟ್ ಸ್ಟೇಡಿಯಂ ಜಾಗದಲ್ಲಿ ಇದೀಗ ಆರಂಭಿಕ ಹಂತದ ಕೆಲಸಗಳು ನಡೆಯುತ್ತಿವೆ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತ ಇತ್ತೀಚೆಗೆ ಜಾಗದ ಎಲ್ಲಾ ದಾಖಲಾತಿಗಳನ್ನು ಸಮರ್ಪಕಗೊಳಿಸಿ ಕೆಎಸ್‌ಸಿಎಗೆ ಹಸ್ತಾಂತರಿಸಿದೆ.

ಈ ಜಾಗಕ್ಕೆ ಸಂಬAಧಿಸಿದAತೆ ಎದುರಾಗಿದ್ದ ಸ್ಮಶಾನ ಸ್ಥಳದ ಬೇಡಿಕೆಗೂ ಜಾಗವನ್ನು ಪ್ರತ್ಯೇಕಿಸಿ ನೀಡಲಾಗಿದೆ. ಒಟ್ಟು ೧೧.೭೦ ಎಕರೆಯಲ್ಲಿ ಆಧುನಿಕ ಮಾದರಿಯ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ಭವಿಷ್ಯದಲ್ಲಿ ತಲೆ ಎತ್ತಲಿದ್ದು, ಜಿಲ್ಲೆಗೊಂದು ಕೊಡುಗೆಯಾಗಲಿದೆ. ಕಳೆದ ಹಲವಷ್ಟು ವರ್ಷಗಳ ಹಿಂದಿನ ಈ ಯೋಜನೆ ಜಾಗ ವಿವಾದದಿಂದಾಗಿ ಈ ತನಕ ನೆನೆಗುದಿಗೆ ಬಿದ್ದಿತ್ತು. ಹಲವು ಬಾರಿ ಕಾಮಗಾರಿಗಳು ಆರಂಭಗೊAಡಿತ್ತಾದರೂ

(ಮೊದಲ ಪುಟದಿಂದ) ಮತ್ತೆ ಮತ್ತೆ ವಿವಾದಗಳು ಸೃಷ್ಟಿಯಾಗುತ್ತಿದ್ದರಿಂದ ಇದು ಅಷ್ಟರಲ್ಲೇ ಸ್ಥಗಿತಗೊಳ್ಳುತ್ತಿತ್ತು. ಕೆಎಸ್‌ಸಿಎ ಪ್ರಮುಖರು, ಪರಿಣತರ ತಂಡ ಕೂಡ ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದು, ಮಣ್ಣು ಪರೀಕ್ಷಾ ವರದಿ ಕೂಡ ಪೂರಕವಾಗಿತ್ತು. ಇದೀಗ ನ್ಯಾಯಾಲಯ ಚಾಟಿ ಬೀಸಿದ್ದರಿಂದ ಬಹುತೇಕ ಎಲ್ಲಾ ವಿವಾದಗಳು ಬಗೆಹರಿದಂತಾಗಿದ್ದು, ೧೧.೭೦ ಎಕರೆ ಜಾಗವನ್ನು ನಕ್ಷೆ ಮತ್ತಿತರ ದಾಖಲಾತಿ ಸಹಿತವಾಗಿ ಕೆಎಸ್‌ಸಿಎಗೆ ಹಸ್ತಾಂತರಿಸಲಾಗಿದೆ. ಜಿಲ್ಲಾಡಳಿತ ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದು, ಇನ್ನು ಸ್ಟೇಡಿಯಂ ನಿರ್ಮಾಣದ ಕೆಲಸ ರಾಜ್ಯ ಕ್ರಿಕೆಟ್‌ಸಂಸ್ಥೆಗೆ ಸೇರಿದೆ. ಜಿಲ್ಲಾಡಳಿತ ಯಾವುದೇ ಸಮಸ್ಯೆಯಾಗದಂತೆ ಹಾಗೂ ಕಾನೂನು ಉಲ್ಲಂಘನೆಯಾಗದAತೆ ಅಗತ್ಯ ಸಹಕಾರ ನೀಡಲು ಸಿದ್ಧವಿರುವುದಾಗಿ ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರೂ ಅಗತ್ಯ ಸಹಕಾರ ನೀಡಿದ್ದಾರೆ.

ಪ್ರಸ್ತುತ ೧೧.೭೦ ಎಕರೆ ಜಾಗದ ಸುತ್ತಲೂ ಕಂದಕ ನಿರ್ಮಾಣದೊಂದಿಗೆ, ಸಿ.ಸಿ. ಕೆಮರಾಗಳನ್ನು ಅಳವಡಿಸಲಾಗಿದೆ. ಇದೀಗ ಜಾಗದ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಇದಾದ ಬಳಿಕ ಸದ್ಯದ ಅಗತ್ಯ ಆರಂಭಿಕ ಕೆಲಸ ನಡೆಯಲಿದೆ. ಇದಾದ ಬಳಿಕ ಕೆಎಸ್‌ಸಿಎ ಪ್ರಮುಖರು ಹಾಗೂ ತಜ್ಞರ ತಂಡ ಭೇಟಿ ನೀಡಲಿದ್ದು, ಸುಮಾರು ೨೦ ಸಾವಿರ ಜನರಿಗೆ ಅವಕಾಶವಿರುವ ಹಾಗೂ ಇನ್ನಿತರ ಎಲ್ಲಾ ಸೌಲಭ್ಯಗಳಿರುವ ಸ್ಟೇಡಿಯಂ ನಿರ್ಮಾಣ ಯೋಜನೆ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ತಿಳಿಸಿದ್ದಾರೆ.