ಸಿದ್ದಾಪುರ, ಏ ೬: ಕಣ್ಣಂಗಾಲ ಹಾಗೂ ಸಿದ್ದಾಪುರದ ಕರಡಿಗೋಡು ಗ್ರಾಮ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳ ಹಾವಳಿ ಪ್ರಾರಂಭವಾಗಿದೆ. ಆಹಾರವನ್ನು ಅರಿಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಇದೀಗ ಕಣ್ಣಂಗಾಲ ಹಾಗೂ ಕರಡಿಗೋಡು ಗ್ರಾಮಗಳ ಕಾಫಿ ತೋಟಗಳಲ್ಲಿ ಹಲಸಿನ ಕಾಯಿಗಳನ್ನು ಹುಡುಕಿ ಬರುತ್ತಿರುವ ಕಾಡಾನೆಗಳು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ತುಳಿದು ನಾಶಗೊಳಿಸುತ್ತಿದೆಂದು ಕಾಫಿ ಬೆಳೆಗಾರರು ತಿಳಿಸಿದ್ದಾರೆ.

ರಾತ್ರಿ ಸಮಯದಲ್ಲಿ ಕಾಡಾನೆಗಳು ವಸತಿ ಪ್ರದೇಶಗಳ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದು, ಕೆಲವು ಬೆಳೆಗಾರರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.

ಕರಡಿಗೋಡು ಗ್ರಾಮದ ಚಿಕ್ಕನಳ್ಳಿ, ಹೇರೂರು ಭಾಗದಲ್ಲಿ ಕಾಡಾನೆಗಳು ದಿನನಿತ್ಯ ರಾತ್ರಿ ಹಾಗೂ ಬೆಳಗಿನ ಜಾವ ಸಂಚರಿಸುವುದರಿAದ ಕಾಫಿ ತೋಟಗಳಲ್ಲಿ ಕೆಲಸ ಕಾರ್ಮಿಕರು ಭಯಭೀತರಾಗಿದ್ದಾರೆ. ರಾತ್ರಿ ಸಮಯದಲ್ಲಿ ವಾಹನಗಳು ತೆರಳಲು ಕೂಡ ಸಮಸ್ಯೆಯಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಕರಡಿಗೋಡು ಭಾಗದಲ್ಲಿ ಉಪಟಳ ನೀಡುತ್ತಿದ್ದ ಸಲಗವೊಂದನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಆದರೆ ಅಮ್ಮತ್ತಿ ಭಾಗದಲ್ಲಿ ಕಾಡಾನೆಯೊಂದನ್ನು ಸೆರೆ ಹಿಡಿಯಲು ಅನುಮತಿ ದೊರೆತಿದ್ದರೂ ಈವರೆಗೂ ಸೆರೆ ಹಿಡಿಯಲಿಲ್ಲ. ಅಮ್ಮತ್ತಿ ಭಾಗದಲ್ಲಿ ಕೂಡ ಕಾಡಾನೆಗಳ ಹಾವಳಿ ಇದ್ದು ಕರಡಿಗೋಡು ಭಾಗದಲ್ಲಿ ಒಂಟಿ ಸಲಗವೊಂದು ಆಗಿಂದಾಗ್ಗೆ ಕಾಫಿ ತೋಟಗಳಲ್ಲಿ ಸುತ್ತಾಡುತ್ತಾ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

-ವಾಸು ಎ.ಎನ್