ಸೋಮವಾರಪೇಟೆ, ಏ. ೪: ಚುನಾವಣೆ-ಮತದಾನಗಳು ಪ್ರಜಾಪ್ರಭುತ್ವದ ಹಬ್ಬವಾಗಿವೆ. ಇದರಿಂದ ಯಾರೂ ಕೂಡ ವಂಚಿತರಾಗಬಾರದು. ವಿಶೇಷವಾಗಿ ಯುವ ಜನಾಂಗ ಶೇ. ೧೦೦ ರಷ್ಟು ಮತದಾನದಲ್ಲಿ ಭಾಗಿಯಾಗಬೇಕು ಎಂದು ಬಸವಾ ಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಕರೆ ನೀಡಿದರು. ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಸಮೀಪದ ಯಡೂರು ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಶಿವಕುಮಾರ ಸ್ವಾಮೀಜಿಗಳ ೧೧೬ನೇ ಜನ್ಮಜಯಂತಿ, ಸರಸ್ವತಿ ಪೂಜೆ ಹಾಗೂ ಕಾಲೇಜು ಸಂಸ್ಥಾಪಕರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ದೀಪಾವಳಿ, ಯುಗಾದಿ ಹೇಗೆ ಹಬ್ಬವಾಗುತದೆಯೋ ಅದೇ ರೀತಿ ಚುನಾವಣೆಯೂ ಪ್ರಜಾಪ್ರಭುತ್ವದ ಹಬ್ಬವಾಗಬೇಕು ಎಂದ ಅವರು, ಇಂದಿನ ವಿದ್ಯಾರ್ಥಿಗಳೇ ರಾಷ್ಟçದ ಭವಿಷ್ಯದ ಪ್ರಜೆಗಳು. ಆದ್ದರಿಂದ ಯಾರೂ ಕೂಡ ಮತದಾನದಿಂದ ತಪ್ಪಿಸಿಕೊಳ್ಳಬಾರದು. ನನ್ನ ಒಂದು ಮತದಿಂದ ಏನಾಗುತ್ತದೆ ಎಂಬ ತಾತ್ಸಾರದಿಂದ ಹೊರಬಂದು, ಯಾವುದೇ ಆಮಿಷಗಳಿಗೆ ಬಲಿ ಯಾಗದೆ, ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಕಾಯಕಯೋಗಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜನ್ಮದಿನ ನಾಡಿನಾದ್ಯಂತ ಆಚರಿಸ ಲಾಗುತ್ತಿದೆ. ಸಿದ್ಧಗಂಗಾ ಮಠದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಕ್ಕಳಿಗೆ ಆಶ್ರಯ ನೀಡಿ ವಿದ್ಯಾದಾನ ಮಾಡಲಾಗುತ್ತಿದೆ. ಲಕ್ಷಾಂತರ ಮಂದಿ ವಿದ್ಯಾವಂತ ರಾಗಿದ್ದಾರೆ. ಅನೇಕ ಮಂದಿ ಉನ್ನತ ಸ್ಥಾನದಲ್ಲಿದ್ದಾರೆ ಎಂದ ಅವರು ಶ್ರೀಗಳ ತತ್ವ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜು ಸಂಸ್ಥಾಪಕ ಸಮಿತಿ ಕಾರ್ಯದರ್ಶಿ ಎ.ಪಿ. ಶಂಕರಪ್ಪ ಹಾಗೂ ಶಾರದಮ್ಮ ದಂಪತಿ, ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಬಿ.ಟಿ. ಚೆನ್ನಯ್ಯ ಅವರ ಪರವಾಗಿ ಅವರ ಮೊಮ್ಮಗ ರೋಹಿತ್ ರಾಮದೇವ್ ಅವರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಧನಲಕ್ಷ್ಮೀ ವಹಿಸಿದ್ದರು. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಎಸ್. ಮಹೇಶ್, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರವೀಣ್, ಕಾಲೇಜು ಹಿಂದಿನ ಆಡಳಿತ ಮಂಡಳಿ ಸದಸ್ಯರಾದ ಎ.ಪಿ. ಶಿವರುದ್ರಪ್ಪ, ಪುಪ್ಪಯ್ಯ, ಯಡೂರು ಗ್ರಾಮ ಸಮಿತಿ ಅಧ್ಯಕ್ಷ ವೈ. ಈ. ವಿಜಯ್ ಸೇರಿದಂತೆ ಇತರರು ಹಾಜರಿದ್ದರು.