ಸಿದ್ದಾಪುರ, ಏ. ೪: ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಹಸುವೊಂದು ಪ್ಲಾಸ್ಟಿಕ್ ತಿಂದ ಪರಿಣಾಮ ಸಮರ್ಪಕವಾದ ಚಿಕಿತ್ಸೆ ಸಿಗದೇ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿದೆ.
ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಹಾಗೂ ಕುಂಬಾರಗುAಡಿಯ ನಿವಾಸಿಯಾಗಿರುವ ಮುಸ್ತಫ ಎಂಬವರಿಗೆ ಸೇರಿದ ಹಸುವೊಂದು ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಪ್ಲಾಸ್ಟಿಕ್ ಕಸವನ್ನು ತಿಂದಿದ್ದು, ಈ ಬಗ್ಗೆ ವಿಚಾರ ತಿಳಿದ ಹಸುವಿನ ಮಾಲೀಕ ಮುಸ್ತಫ ಸಿದ್ದಾಪುರದ ಪಶುವೈದ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕೊಂಡೊಯ್ದಿದ್ದಾರೆ. ಆದರೆ ಇಲ್ಲಿ ಸಮರ್ಪಕವಾದ ಚಿಕಿತ್ಸೆ ಲಭಿಸಿರುವುದಿಲ್ಲ ಎಂದು ಮುಸ್ತಫ ತಿಳಿಸಿದ್ದಾರೆ. ಪಶು ಆಸ್ಪತ್ರೆಯಲ್ಲಿ ವೈದ್ಯರುಗಳು ಇಲ್ಲದೇ ಸಿಬ್ಬಂದಿಗಳು ನೀಡಿದ ಚಿಕಿತ್ಸೆಯಿಂದಾಗಿ ಹಸು ಗುಣಮುಖ ಹೊಂದದೆ ಇದೀಗ ಹೊಟ್ಟೆ ದಪ್ಪವಾಗಿ ಗಂಭೀರ ಸ್ಥಿತಿಗೆ ತಲುಪಿದೆ. ಬೆಲೆಬಾಳುವ ಹಸು ಆಹಾರವನ್ನು ಸೇವಿಸದೇ ನಿತ್ರಾಣಗೊಂಡು ಜೀವನ್ಮರಣ ಸ್ಥಿತಿಯಲ್ಲಿ ದಿನ ದೂಡುತ್ತಿದೆ ಎಂದು ಮುಸ್ತಫ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರದ ಪಶು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಸಮಸ್ಯೆಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
- ವಾಸು.