ಮಡಿಕೇರಿ, ಏ. ೪: ಕಂದಾಯ ನಿಗದಿಯಾಗದೆ ಇರುವ ಎಲ್ಲಾ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಪಡಿಸುವ ಕುರಿತಾಗಿ ಹೊಸ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಈ ಪ್ರಕ್ರಿಯೆಗೆ ಸೂಚನೆ ನೀಡಲಾಗಿದ್ದು, ಇದಕ್ಕೆ ಮಡಿಕೇರಿ ತಾಲೂಕಿನ ಬೇಂಗೂರು ಗ್ರಾಮವನ್ನು ಆಯ್ಕೆ ಮಾಡಲಾಗಿದೆ.

ಮಡಿಕೇರಿ ತಹಶೀಲ್ದಾರರು, ಭೂದಾಖಲೆಗಳ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಬೇಂಗೂರು ಗ್ರಾಮದ ಕಂದಾಯಕ್ಕೆ ಬಾರದ ೧೧೬ ಸರ್ವೆ ನಂ.ಗಳನ್ನು ಕಂದಾಯಕ್ಕೆ ತರುವ ಪ್ರಕ್ರಿಯೆ ಪ್ರಾರಂಭಿಸಲು ಏಪ್ರಿಲ್ ೧ ರಿಂದ ಕ್ಷೇತ್ರ ಸರ್ವೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಪ್ರತಿವಾರ ಎರಡು ದಿನಗಳಂದು ೬ ಜನ ಸರ್ವೆ ಸಿಬ್ಬಂದಿ ಮತ್ತು ನಿಯೋಜಿತ ಗ್ರಾಮ ಆಡಳಿತಾಧಿಕಾರಿಗಳು ಕಡ್ಡಾಯವಾಗಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದು. ಸದರಿ ಕಾರ್ಯವನ್ನು ಕಂದಾಯ ಪರಿವೀಕ್ಷಕರು ಮತ್ತು ಸರ್ವೆ ಸೂಪರ್‌ವೈಸರ್‌ಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.

ಪ್ರತಿ ಪೂರ್ಣ ಸರ್ವೆ ನಂ. ನಲ್ಲಿ ಇರುವಂತಹ ಮನೆಗಳು, ಲೈನ್‌ಮನೆ, ಸಾರ್ವಜನಿಕ ರಸ್ತೆ, ವಾಣಿಜ್ಯ ಸಂಕೀರ್ಣ ಮತ್ತು ಕೃಷಿಯೇತರ ಬಳಕೆಯ ನಿರ್ಮಾಣಗಳ ವಿಸ್ತೀರ್ಣಗಳನ್ನು ಗುರುತಿಸಿ, ಅದನ್ನು ಹೊರತುಪಡಿಸಿ ಉಳಿದ ಸಾಗು ವಿಸ್ತೀರ್ಣಕ್ಕೆ ಕಂದಾಯ ನಿಗದಿಪಡಿ ಸುವ ಸಂಬAಧ ಅಗತ್ಯ ದಾಖಲೆ ಗಳನ್ನು ಸಿದ್ಧಪಡಿಸಿಕೊಳ್ಳಲಾಗುವುದು.

ಪ್ರತಿ ದಿನದ ಅಂತ್ಯದಲ್ಲಿ ಎಷ್ಟು ಸರ್ವೆ ನಂ. ಮತ್ತು ಸರ್ವೆ ನಂ. ಪ್ರಗತಿ ಆಗಿದೆ ಎಂಬ ವರದಿಯನ್ನು ತಹಶೀಲ್ದಾರರು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರು ನೀಡುವುದು ಮತ್ತು ಅದನ್ನು ಸಹಾಯಕ ಆಯುಕ್ತರು ಮತ್ತು ಭೂದಾಖಲೆಗಳ ಉಪನಿರ್ದೇಶಕರು ನೋಡಿಕೊಳ್ಳುವುದು ಎಂಬದಾಗಿ ಉಪವಿಭಾಗಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೊಡಗು ಸೇವಾ ಕೇಂದ್ರ ಮತ್ತು ಸಿಪಿಎ ಕೊಡಗು ಇವರ ನಿರಂತರ ಪರಿಶ್ರಮದಿಂದ ಕೊಡಗಿನ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಮಾಡಲು ಜಿಲ್ಲಾಧಿಕಾರಿ, ಉಪವಿಭಾಗ ಅಧಿಕಾರಿ, ಡಿಡಿಎಲ್‌ಆರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಬೇಂಗೂರು ಗ್ರಾಮ ವನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಗ್ರಾಮಗಳಿಗೂ ಕಂದಾಯ ನಿಗದಿ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಭಾಗಮಂಡಲ ಹೋಬಳಿಯ ಬೇಂಗೂರು ಗ್ರಾಮದ ರೈತರು ಅಧಿಕಾರಿಗಳಿಗೆ ಸಹಕರಿಸುವಂತೆ ಕೊಡಗು ಸೇವಾ ಕೇಂದ್ರದ ಪ್ರಮುಖರು ಕೋರಿದ್ದಾರೆ.