ಸೋಮವಾರಪೇಟೆ,ಏ.೩: ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಮುಖರಾದ ಡಿ.ಆರ್. ಪುಟ್ಟರಾಜು ಅವರು, ಐತಿಹಾಸಿಕ ಹೊನ್ನಮ್ಮನಕೆರೆಯಿಂದ ಸುತ್ತಮುತ್ತಲ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹೊಂಡಮಯವಾಗಿವೆ. ವಾಹನಗಳು ತೆರಳಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಂಬAಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ದೂರಿದರು. ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನಕೆರೆ ಮಾರ್ಗವಾಗಿ ಸುಳಿಮಳ್ತೆ, ದೊಡ್ಡಮಳ್ತೆ, ಮೂಕನಕಟ್ಟೆ, ಗಣಪತಿ ದೇವಾಲಯ, ಬಳಗೇರಿ ಬಸವಣ್ಣ ದೇವಾಲಯ ಸಂಪರ್ಕ ರಸ್ತೆಗಳು ತೀರಾ ಹಾಳಾಗಿವೆ. ಕಳೆದ ೨೦ ವರ್ಷಗಳಿಂದ ರಸ್ತೆಯನ್ನು ಸರಿಪಡಿಸಲು ಆಡಳಿತ ಮುಂದಾಗಿಲ್ಲ ಎಂದು ಆರೋಪಿಸಿದರು.

ರಸ್ತೆಯೊಂದಿಗೆ ಚರಂಡಿ, ಮೋರಿಗಳ ವ್ಯವಸ್ಥೆಯೂ ಇಲ್ಲ. ಪರಿಣಾಮ ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚರಿಸಲೂ ಕಷ್ಟಸಾಧ್ಯವಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕಷ್ಟ ಅನುಭವಿಸು ವಂತಾಗಿದೆ. ಶಾಲಾ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ. ಆಟೋಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿವೆ. ದುಬಾರಿ ಬಾಡಿಗೆ ಪಾವತಿಸುವಂತಾಗಿದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿದ್ದರೂ ಸೌಲಭ್ಯಗಳು ದೊರೆತಿಲ್ಲ ಎಂದರು.

ಈ ಭಾಗದಲ್ಲಿ ೪೫೦ಕ್ಕೂ ಅಧಿಕ ಮನೆಗಳಿದ್ದು, ೧೫೦೦ಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಜಿಲ್ಲಾ ಪಂಚಾಯಿತಿಗೆ ಒಳಪಡುವ ರಸ್ತೆಗಳ ಬಗ್ಗೆ ಇಲಾಖೆ ಗಮನ ಹರಿಸುತ್ತಿಲ್ಲ. ಕಳೆದ ವರ್ಷ ಭೂಮಿ ಪೂಜೆ ನೆರವೇರಿಸಿದ ರಸ್ತೆಯೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆ ಈ ರಸ್ತೆಯನ್ನು ಅವಲಂಬಿಸಿರುವ ಮಂದಿ ಪ್ರಸಕ್ತ ಸಾಲಿನ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದರು.

ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ರಸ್ತೆಯ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಬೇಕು. ತಾ. ೩೦ರ ಒಳಗೆ ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಪಟ್ಟಣದ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಇದರೊಂದಿಗೆ ಚುನಾವಣೆಯನ್ನು ಬಹಿಷ್ಕರಿಸ ಲಾಗುವುದು ಎಂದರು. ಗೋಷ್ಠಿ ಯಲ್ಲಿ ಗ್ರಾಮಸ್ಥರಾದ ಡಿ.ಎಸ್. ನಿರಂಜನ್, ಡಿ.ಸಿ. ಶಶಿಕುಮಾರ್, ಡಿ.ಕೆ. ತಿಮ್ಮಯ್ಯ, ಡಿ.ಜೆ. ನವೀನ್ ಅವರುಗಳು ಉಪಸ್ಥಿತರಿದ್ದರು.